Kodagu

ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 24.76 ಲಕ್ಷ ರೂ.ಲಾಭ

admincoorgdaily

ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ  24.76 ಲಕ್ಷ ರೂ.ಲಾಭ
ನಾಪೋಕ್ಲು :ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಟ್ಟಡದಲ್ಲಿ ಅಧ್ಯಕ್ಷರಾದ ಕಲ್ಯಾಟಂಡ ಎ.ರಘು ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ರಘು ತಮ್ಮಯ್ಯ, ಸಂಘವು 20 ಕೋಟಿ 56 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದ್ದು, ಒಟ್ಟು 1,204 ಮಂದಿ ಸದಸ್ಯರನ್ನು ಹೊಂದಿದೆ. 1 ಕೋಟಿ 35 ಲಕ್ಷ ರೂ. ಪಾಲು ಬಂಡವಾಳ ಹೊಂದಿರುವ ಸಂಘವು ಕೆಸಿಸಿ ಸಾಲವಾಗಿ 9 ಕೋಟಿ 20 ಲಕ್ಷ ರೂ., ಜಾಮೀನು ಸಾಲವಾಗಿ 1 ಕೋಟಿ 40 ಲಕ್ಷ ರೂ. ಸೇರಿದಂತೆ ವಿವಿಧ ಸಾಲಗಳನ್ನು ವಿತರಿಸಿದೆ. 

ವ್ಯಾಪಾರ ವಹಿವಾಟಿನ ಮೂಲಕ ಸಂಘವು 24 ಲಕ್ಷ 76 ಸಾವಿರ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.9ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಂಘದ 796 ಮಂದಿ ಸದಸ್ಯರು ಮರಣ ನಿಧಿ ಹಾಗೂ ಇತರ ಪಾವತಿಗಳನ್ನು ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಬಾಕಿ ಪಾವತಿಸುವಂತೆ ರಘುತಮ್ಮಯ್ಯ ಮನವಿ ಮಾಡಿದರು.ಸಂಘವು ಸತತವಾಗಿ ‘ಎ’ ಗ್ರೇಡ್ ಶ್ರೇಣಿಯಲ್ಲಿ ಮುಂದುವರಿಯುತ್ತಿದ್ದು, ನಾಲ್ಕು ಗ್ರಾಮಗಳ ಸದಸ್ಯರ ಬೇಡಿಕೆಯಂತೆ ಸಂಘದ ಕಟ್ಟಡದಲ್ಲಿ ಕೆಡಿಸಿಸಿ ಬ್ಯಾಂಕ್ ಶಾಖೆ ಆರಂಭವಾಗಿದ್ದರಿಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರು.
ಸಂಘದ ಸಾಲ ನೀಡುವ ವ್ಯವಸ್ಥೆಯನ್ನು ಗಣಕೀಕರಣಗೊಳಿಸಲಾಗಿದ್ದು, ಸರ್ಕಾರದ ಸಾಲ ನಿಯಮಗಳಂತೆ ಎಲ್ಲಾ ಸದಸ್ಯರು ಕೃಷಿ ಇಲಾಖೆಯಿಂದ ಎಫ್‌ಐಡಿ ಮಾಡಿಸಿಕೊಂಡು ಸಾಲ ಪಡೆಯಬೇಕು ಎಂದು ತಿಳಿಸಿದರು. ಈಗಾಗಲೇ ಸಂಘದಿಂದ ಸಾಲ ಪಡೆದಿರುವ ಸದಸ್ಯರನ್ನು ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 296 ಮಂದಿ ಸದಸ್ಯರು ನೋಂದಣಿಯಾಗಿದ್ದಾರೆ.
ಸಂಘವು ಇನ್ನಷ್ಟು ಲಾಭ ಗಳಿಸಲು ಎಲ್ಲಾ ಸದಸ್ಯರು ಸಂಘದೊಂದಿಗೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿ ಸಹಕರಿಸಬೇಕೆಂದು ರಘು ತಮ್ಮಯ್ಯ ಮನವಿ ಮಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಮಂಜುಳಾ ಅವರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದ್ದು, ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಸಂಘದ ಸದಸ್ಯರ ಅನುಕೂಲಕ್ಕಾಗಿ ಸಂಘದಲ್ಲಿ ಇ ಸ್ಟ್ಯಾಂಪ್ ವ್ಯವಸ್ಥೆ ಮಾಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಲ್ಲಾರಂಡ ಅಯ್ಯಪ್ಪ, ನಿರ್ದೇಶಕರಾದ ಬಡಕಡ ಎಂ.ಬೆಳ್ಯಪ್ಪ, ನಿಡುಮಂಡ ಹರೀಶ್ ಪೂವಯ್ಯ, ಕಲ್ಯಾಟಂಡ ಎಂ.ಬೋಪಣ್ಣ, ಕೋಡಿಮಣಿಯಂಡ ಎಂ. ನಾಣಯ್ಯ, ಪರದಂಡ ಯು. ಕರುಂಬಯ್ಯ, ನಂಬಡಮಂಡ ಬಿ.ಸುನಿತಾ, ಪರದಂಡ ಪ್ರಮೀಳಾ ಪೆಮ್ಮಯ್ಯ, ಎ.ಎನ್. ಲಕ್ಷ್ಮಣ, ಪಿ.ಟಿ. ಕಾರ್ಯಪ್ಪ, ಕುಡಿಯರ ಅಚ್ಚಯ್ಯ, ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಮೀಳಾ ಪೆಮ್ಮಯ್ಯ ಪ್ರಾರ್ಥಿಸಿದರು.ತಮ್ಮಯ್ಯ ಸ್ವಾಗತಿಸಿ,ಬೆಳ್ಯಪ್ಪ ವಂದಿಸಿದರು.