ಕುಶಾಲನಗರದಲ್ಲಿ ಕಂಬಳದ ಕೋಣಗಳಿಗೆ ಅದ್ಧೂರಿ ಸ್ವಾಗತ; ಮಂತರ್ ಗೌಡರ ಕಾರ್ಯಕ್ಕೆ ಅಶೋಕ್ ರೈ ಮೆಚ್ಚುಗೆ

ಕುಶಾಲನಗರದಲ್ಲಿ ಕಂಬಳದ ಕೋಣಗಳಿಗೆ ಅದ್ಧೂರಿ ಸ್ವಾಗತ; ಮಂತರ್ ಗೌಡರ ಕಾರ್ಯಕ್ಕೆ ಅಶೋಕ್ ರೈ ಮೆಚ್ಚುಗೆ
ಕುಶಾಲನಗರ: ಮೈಸೂರು ದಸರಾ ಕಂಬಳಕ್ಕೆ ತೆರಳುವ ಕೋಣಗಳು ಕುಶಾಲನಗರದಲ್ಲಿ ವಿಶ್ರಾಂತಿ ಪಡೆದ ವೇಳೆ ಆಯೋಜಿಸಿದ್ದ ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ, "ಬೆಳಿಗ್ಗೆ 11-12 ಗಂಟೆಯಿಂದ ಕಾದು ನಮ್ಮನ್ನು ಸ್ವಾಗತಿಸಲು ಕುಳಿತಿದ್ದೀರಿ. ಕಳೆದ ನಾಲ್ಕೈದು ದಿನಗಳಿಂದ ಸಭೆ ಮೇಲೆ ಸಭೆ ನಡೆಸಿ ಇಷ್ಟೊಂದು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿರುವ ಈ ಭಾಗದ ಜನಪ್ರಿಯ ಶಾಸಕ ಡಾ. ಮಂತರ್ ಗೌಡ ಹಾಗೂ ಅವರ ತಂಡಕ್ಕೆ ನಾನು ಮೊದಲು ಅಭಿನಂದನೆ ಸಲ್ಲಿಸುತ್ತೇನೆ" ಎಂದರು.

"ಎಲ್ಲಾ ಸಂಘಟನೆಗಳು, ಬೇರೆ ಬೇರೆ ಧರ್ಮ, ಜಾತಿಯ ಬಂಧುಗಳೆಲ್ಲರೂ ಬ್ಯಾಂಡ್ ಸಮೇತ ನಮ್ಮನ್ನು ಸ್ವಾಗತಿಸಿದ್ದೀರಿ. ಕರಾವಳಿ ಭಾಗದ ಜನರ ಪರವಾಗಿ ನಿಮಗೆ ಧನ್ಯವಾದ" ಎಂದು ಕೃತಜ್ಞತೆ ಸಲ್ಲಿಸಿದರು.

ಕಂಬಳದಿಂದ ನಮಗೆ ಕೀರ್ತಿ;

"ಕಂಬಳದಿಂದ ನಮಗೆ ಕೀರ್ತಿ ಬಂದಿದೆ, ನಮ್ಮಿಂದ ಕಂಬಳಕ್ಕಲ್ಲ. ದಕ್ಷಿಣ ಕನ್ನಡದಲ್ಲಿ ಕಂಬಳ ಮಾಡಿದವರೆಲ್ಲರೂ ಜನಪ್ರತಿನಿಧಿಗಳಾಗಿ ಮತ್ತೆ ಮತ್ತೆ ಆಯ್ಕೆಯಾಗಿದ್ದಾರೆ. ಮಂತರ್ ಗೌಡರೂ ಕೂಡ ಮುಂದಿನ ದಿನಗಳಲ್ಲಿ ಜೊತೆ ಕೋಣಗಳನ್ನು ಓಡಿಸಿದರೆ, ಖಂಡಿತ ಮತ್ತೊಮ್ಮೆ ಮಂತ್ರಿಯಾಗಿ ಬರುತ್ತಾರೆ" ಎಂದು ಭವಿಷ್ಯ ನುಡಿದರು.

ವಿದ್ಯಾವಂತರು ರಾಜಕೀಯಕ್ಕೆ ಬರಬೇಕು;

"ಡಾ. ಮಂತರ್ ಗೌಡರು MBBS ಮಾಡಿದ ಸ್ಪೆಷಲಿಸ್ಟ್ ಡಾಕ್ಟರ್. ಅವರಿಗೆ ಶಾಸಕನಾಗುವ ಅವಶ್ಯಕತೆ ಇರಲಿಲ್ಲ. ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಮಾಡಿದ್ದರೆ ತಿಂಗಳಿಗೆ ನಾಲ್ಕು ಲಕ್ಷ ಆದಾಯ ಬರುತ್ತಿತ್ತು. ಅದನ್ನೆಲ್ಲ ಬಿಟ್ಟು ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದಾರೆ. ವಿದ್ಯಾವಂತರು ರಾಜಕೀಯಕ್ಕೆ ಬಂದಾಗ ಮಾತ್ರ ಜನರಿಗೆ ನ್ಯಾಯ ಸಿಗುತ್ತದೆ. ಅಂತಹ ಜನನಾಯಕನನ್ನು ಉಳಿಸಿಕೊಳ್ಳುವ ಕೆಲಸ ಕುಶಾಲನಗರ, ಮಡಿಕೇರಿ ಜನರು ಮಾಡಬೇಕು" ಎಂದು ಮನವಿ ಮಾಡಿದರು.

ಕಾವೇರಿ ಪುಣ್ಯ ತೀರ್ಥದ ಕಾರಣ ಕಾರ್ಯಕ್ರಮವನ್ನು ಬೇಗ ಮುಗಿಸಬೇಕಾಯಿತು ಎಂದು ತಿಳಿಸಿದ ಅವರು, "ಮನುಷ್ಯನಲ್ಲಿ ಉಳಿಯುವುದು ಪ್ರೀತಿ ವಿಶ್ವಾಸ ಮಾತ್ರ. ಬರುವಾಗ ಏನೂ ತರುವುದಿಲ್ಲ, ಹೋಗುವಾಗ ಏನೂ ಕೊಂಡೊಯ್ಯುವುದಿಲ್ಲ" ಎಂದು ಹೇಳಿ ಎಲ್ಲರಿಗೂ ಕೈಮುಗಿದು ಧನ್ಯವಾದ ಅರ್ಪಿಸಿದರು.

ಹಾಸನದಲ್ಲಿ ರೇವಣ್ಣನವರು ಕೂಡ ಉತ್ತಮ ವ್ಯವಸ್ಥೆ ಮಾಡಿದ್ದರು ಎಂದು ಸ್ಮರಿಸಿದ ಅವರು, ಬುಧವಾರ ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಕುಶಾಲನಗರದ ಜನರನ್ನು ಆಹ್ವಾನಿಸಿದರು.

ವೇದಿಕೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಂಬಳ ಸಮಿತಿ ಅಧ್ಯಕ್ಷರು, ನಗರ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.