Kodagu

ಕನಕದಾಸರ ಚಿಂತನೆ, ಕೀರ್ತನೆಗಳು ಮಾನವಕುಲಕ್ಕೆ ಸದಾ ದಾರಿದೀಪ: ಜಯಲಕ್ಷ್ಮಿ ರಾಯಕೋಡ್

admincoorgdaily

ಕನಕದಾಸರ ಚಿಂತನೆ, ಕೀರ್ತನೆಗಳು ಮಾನವಕುಲಕ್ಕೆ ಸದಾ ದಾರಿದೀಪ: ಜಯಲಕ್ಷ್ಮಿ ರಾಯಕೋಡ್
ಮಡಿಕೇರಿ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.

   ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ದಾರ್ಶನಿಕ ಸಂತ, ಶ್ರೇಷ್ಠ ಕವಿ ಹಾಗೂ ಸಮಾಜ ಸುಧಾರಕ ಕನಕದಾಸರ ಜೀವನ, ಚಿಂತನೆ ಹಾಗೂ ಕೀರ್ತನೆಗಳು ಕೇವಲ ಒಂದು ಕಾಲಘಟ್ಟಕ್ಕೆ ಅಥವಾ ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿಲ್ಲ. ಅವು ಇಂದಿಗೂ, ಎಂದೆಂದಿಗೂ ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದರು.

    ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವ ಉದ್ದೇಶ ಅವರ ಆದರ್ಶ, ಚಿಂತನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಕನಕದಾಸರು ತಮ್ಮ ಚಿಂತನೆಗಳ ಮೂಲಕ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿದ್ದಾರೆ ಎಂದು ತಿಳಿಸಿದರು.

    ಕನಕದಾಸರ ಕೀರ್ತನೆಗಳಲ್ಲಿ ಸತ್ಯ, ಸರಳತೆ ಹಾಗೂ ಮಾನವೀಯತೆಯ ಸಂದೇಶ ಅಡಕವಾಗಿದೆ. ಸತ್ಯವಂತರ ಸಂಗದಲ್ಲಿದ್ದಾಗ ಯಾವುದೇ ರೀತಿಯ ತೀರ್ಥಸ್ನಾನದ ಅಗತ್ಯವಿಲ್ಲ ಎಂಬ ಕನಕದಾಸರ ಸಂದೇಶವು ಮನುಷ್ಯನ ಆಂತರಿಕ ಶುದ್ಧತೆ ಹಾಗೂ ಸತ್ಯನಿಷ್ಠೆಯ ಮಹತ್ವವನ್ನು ಸಾರುತ್ತದೆ. ಸರಳ ಜೀವನ ನಡೆಸುತ್ತಾ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಿದ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಅನುಕರಣೀಯವಾಗಿವೆ ಎಂದು ಜಯಲಕ್ಷ್ಮಿ ರಾಯಕೋಡ್ ಹೇಳಿದರು.

   ಸೋಮವಾರಪೇಟೆ ತಾಲ್ಲೂಕಿನ ಬೆಸೂರು ಪ್ರೌಢಶಾಲೆಯ ಶಿಕ್ಷಕ ಕೆ.ಎನ್.ಕಿರಣ್ ಕುಮಾರ್ ಮಾತನಾಡಿ, ಕನಕದಾಸರು ಬಾಲ್ಯದಿಂದಲೇ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಚಿಂತನೆ ಹೊಂದಿದ್ದರು. ಯಾವುದೇ ಬಾಹ್ಯ ಬಲವಿಲ್ಲದಿದ್ದರೂ ತಮ್ಮ ಜ್ಞಾನಶಕ್ತಿ, ಭಕ್ತಿ ಹಾಗೂ ಕೀರ್ತನೆಗಳ ಮೂಲಕ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

    ಕನಕದಾಸರ ಜೀವನವನ್ನು ಅವಲೋಕಿಸಿದಾಗ ಅವರಲ್ಲಿ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತ ಬಾಲ್ಯದಿಂದಲೇ ಇತ್ತು ಎಂಬುದು ತಿಳಿದುಬರುತ್ತದೆ. ಆದರೆ ಅವರಿಗೆ ಅಕ್ಷರಜ್ಞಾನ, ಜನಬಲ, ಹಣಬಲ ಸೇರಿದಂತೆ ಯಾವುದೇ ಬಾಹ್ಯ ಶಕ್ತಿಗಳ ಬೆಂಬಲವಿರಲಿಲ್ಲ. ಇಂತಹ ಸೀಮಿತ ಪರಿಸ್ಥಿತಿಗಳ ನಡುವೆಯೂ ತಮ್ಮ ಅಪಾರ ಜ್ಞಾನಶಕ್ತಿಯಿಂದ ವಿಶಿಷ್ಟ ಚರಿತ್ರೆಯನ್ನು ನಿರ್ಮಿಸಿಕೊಂಡರು ಎಂದರು.

    ಯಾವುದೇ ಬಾಹ್ಯ ಬಲವಿಲ್ಲದ ವ್ಯಕ್ತಿಯೊಬ್ಬರು ತಮ್ಮ ಜ್ಞಾನಶಕ್ತಿಯಿಂದ ಇಡೀ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿರುವುದು ಕನಕದಾಸರ ವ್ಯಕ್ತಿತ್ವದ ಮಹತ್ವವನ್ನು ಸಾರುತ್ತದೆ. ಅವರ ಜ್ಞಾನಶಕ್ತಿಯ ಆಳ, ಚಿಂತನೆ ಹಾಗೂ ಸಾಧನೆಯನ್ನು ನಾವು ಸಮಗ್ರವಾಗಿ ಅವಲೋಕಿಸಬೇಕಾಗಿದೆ ಎಂದು ತಿಳಿಸಿದರು.

    ನಾರಾಯಣನ ಭಕ್ತರಾಗಿ ಕೀರ್ತನೆಗಳನ್ನು ರಚಿಸಿ, ಹಾಡುವ ಮೂಲಕ ಭಕ್ತಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ಜನರಿಗೆ ತಲುಪಿಸಿದ ಕನಕದಾಸರು ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ನೆಲೆಸಿದ್ದಾರೆ ಎಂದು ಹೇಳಿದರು.

    ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ ಮಾತನಾಡಿ, ಮಾನವೀಯ ಮೌಲ್ಯಗಳು ವ್ಯಕ್ತಿಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದಾಗ ಬದುಕು ಕೇವಲ ಅಸ್ತಿತ್ವದ ಹೋರಾಟವಾಗಿ ಉಳಿಯುವುದಿಲ್ಲ. ಅದು ಅರ್ಥಪೂರ್ಣ, ನೆಮ್ಮದಿಯ ಹಾಗೂ ಸಮಾಜಮುಖಿ ಪಯಣವಾಗುತ್ತದೆ ಎಂದರು.

    ಕುಶಾಲನಗರದ ಹಿರಿಯ ರಂಗಭೂಮಿ ಕಲಾವಿದ ಬರಮಣ್ಣ ಟಿ. ಬೆಟಗೇರಿ ಮಾತನಾಡಿ, ಕನಕದಾಸರು ತಮ್ಮ ಗೀತೆಗಳ ಮೂಲಕ ವೈಚಾರಿಕ ವಿಚಾರಗಳನ್ನು ವಿವರಿಸಿದ್ದಾರೆ. ಕೀರ್ತನೆಗಳ ಮೂಲಕ ನಿಜವಾದ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಕನಕದಾಸರ ಕೀರ್ತನೆಗಳನ್ನು ಉಲ್ಲೇಖಿಸಿ ವಿವರಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಹಾಗೂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಇದ್ದರು.
 ಉಪನ್ಯಾಸಕಿ ಜಯಲಕ್ಷ್ಮಿ ಹಾಗೂ ಸಮರ್ಥ ಕನ್ನಡಿಗರು ಸಂಘಟನೆಯ ಸಂಚಾಲಕಿ ಸೌಮ್ಯ ಅವರು ನಾಡಗೀತೆ ಮತ್ತು ವಂದೇ ಮಾತರಂ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.