Kodagu

ಕಸ್ತೂರಿ ರಂಗನ್ ವರದಿ ಕರಡಿಗೋಡಿನಲ್ಲಿ ಗ್ರಾಮಸ್ಥರ ವಿರೋಧ

admincoorgdaily

ಕಸ್ತೂರಿ ರಂಗನ್ ವರದಿ ಕರಡಿಗೋಡಿನಲ್ಲಿ ಗ್ರಾಮಸ್ಥರ ವಿರೋಧ
ಸಿದ್ದಾಪುರ;
ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ವಿಚಾರವಾಗಿ ರೈತ ಸಂಘದ ಕೋರಿಕೆ ಮೇರೆಗೆ ಕರಡಿಗೋಡು ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು ಸಭಾಂಗಣದಲ್ಲಿ ಸ್ಥಳಾವಕಾಶದ ಕೊರತೆಯಿಂದ ಶಾಲಾ ಮೈದಾನದಲ್ಲಿ ಸಭೆ ಆಯೋಜಿಸಲಾಯಿತು.

ರೈತ ಸಂಘದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ ಮಾತನಾಡಿ, ವರದಿಯಲ್ಲಿ ಕರಡಿಗೋಡು ಗ್ರಾಮವನ್ನು ಹಸಿರು ಪಟ್ಟಿಯಲ್ಲಿ ಗುರುತಿಸಿರುವುದು ರೈತರ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಹೇಳಿದರು ಉಪಗ್ರಹ ಆಧಾರಿತ ಸಮೀಕ್ಷೆ ಕೈಬಿಟ್ಟು, ಅರಣ್ಯದ ನೈಜ ಗಡಿಯನ್ನು ಸರ್ವೆ ನಡೆಸಿ ವರದಿಯನ್ನು ಅರಣ್ಯ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಒತ್ತಾಯಿಸಿದರು


ತಲತಲಾಂತರಗಳಿಂದ ಕೃಷಿಭೂಮಿ ಹೊಂದಿರುವ ರೈತರು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಲು ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು ವರದಿ ಜಾರಿಯಾದಲ್ಲಿ ವನ್ಯಮೃಗಗಳಿಂದ ಬೆಳೆ ಹಾನಿಯಾದಾಗ ಪರಿಹಾರ ದೊರೆಯುವ ಬಗ್ಗೆಯೂ ಸ್ಪಷ್ಟತೆ ಅಗತ್ಯ ಎಂದರು.

ಕಾರ್ಮಿಕ ಮುಖಂಡ ಎಚ್.ಬಿ. ರಮೇಶ್ ಮಾತನಾಡಿ, ವರದಿಯಲ್ಲಿನ ವಲಯ ವಿಂಗಡಣೆಯಿಂದ ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎ. ಯಮುನಾ, ಕಸಾಪ ಅಮ್ಮತ್ತಿ ಹೋಬಳಿ ಅಧ್ಯಕ್ಷ ಟಿ.ಎಚ್. ಮಂಜುನಾಥ್, ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪನ್ ಸೇರಿದಂತೆ ಹಲವರು ಅಭಿಪ್ರಾಯ ಮಂಡಿಸಿದರು.

ಸಭೆಯ ನೋಡಲ್ ಅಧಿಕಾರಿಯಾಗಿ ಪೊನ್ನಂಪೇಟೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ದೀನ ಎಂ.ಕೆ. ಭಾಗವಹಿಸಿದ್ದರು
ಅಧ್ಯಕ್ಷತೆ ವಹಿಸಿದ್ದ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಸಿ. ಜನಿಶ್ ಕುಮಾರ್ ಮಾತನಾಡಿ, ಗ್ರಾಮಸ್ಥರು ಕೈಗೊಂಡ ಒಕ್ಕೊರಲಿನ ನಿರ್ಣಯವನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ವೆಂಕಟೇಶ್, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಸೂದನ ಸತೀಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ. ಬಶೀರ್, ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರತೀಶ್, ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.