Kodagu

ಕಸ್ತೂರಿ ರಂಗನ್ ವರದಿ ತಿರಸ್ಕಾರ ರೈತರ ರಕ್ಷಣೆಗೆ ಸದಾ ಬದ್ಧ: ಶಾಸಕ ಮಂತರ್ ಗೌಡ

admincoorgdaily

ಕಸ್ತೂರಿ ರಂಗನ್ ವರದಿ ತಿರಸ್ಕಾರ ರೈತರ ರಕ್ಷಣೆಗೆ ಸದಾ ಬದ್ಧ: ಶಾಸಕ ಮಂತರ್ ಗೌಡ
ಮಡಿಕೇರಿ: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ವಿಧಾನಸಭೆಯಲ್ಲಿ ಧ್ವನಿ ಎತ್ತಿ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.

ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, "ವಿಧಾನಸೌಧದ ವಿಶೇಷ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಸ್ತೂರಿ ರಂಗನ್ ವಿಚಾರದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರು. ಕೊಡಗಿನ ರೈತರ ಸಮಸ್ಯೆಗೆ ಧ್ವನಿ ಎತ್ತಲು ಅವಕಾಶ ಕಲ್ಪಿಸಿದ್ದಕ್ಕಾಗಿ ಅವರಿಗೆ ಅಭಿನಂದನೆ" ಎಂದರು.

"ಸರ್ಕಾರ ಅತ್ಯುತ್ತಮ ತೀರ್ಮಾನ ಕೈಗೊಂಡಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕೊಡಗಿನ 53 ಹಳ್ಳಿಗಳಿಗೆ ತೊಂದರೆಯಾಗುತ್ತದೆ. ಗ್ರೌಂಡ್ ಲೆವೆಲ್ ಸರ್ವೆ ಮಾಡದೆ ಸ್ಯಾಟಲೈಟ್ ಮೂಲಕ ಗ್ರಾಮ ಗುರುತಿಸಿರುವುದು ಯಾರೂ ಒಪ್ಪುವಂತದ್ದಲ್ಲ. ಹೀಗಾಗಿ ರಾಜ್ಯ ಸರ್ಕಾರ ವರದಿ ತಿರಸ್ಕರಿಸಿರುವುದು ಸ್ವಾಗತಾರ್ಹ" ಎಂದು ಹೇಳಿದರು.

"ನಾವು ರೈತರ ಪರ ನಿಲ್ಲುತ್ತೇವೆ. ರೈತರ ಬದುಕು, ಅಭಿವೃದ್ಧಿ ಪರ ನಿಲ್ಲುತ್ತೇವೆ. ಜೊತೆಗೆ ಅರಣ್ಯ ರಕ್ಷಣೆ ನಮ್ಮ ಜವಾಬ್ದಾರಿ. ಅರಣ್ಯವನ್ನು ರೈತರು ಸೇರಿದಂತೆ ನಾವೆಲ್ಲರೂ ಕಾಪಾಡಿಕೊಂಡು ಬಂದಿದ್ದೇವೆ. ಅರಣ್ಯ ಹಾಳಾಗಲು ರೈತರೇ ಕಾರಣ ಎಂಬ ಕೆಟ್ಟ ಸಂದೇಶ ಹಬ್ಬುತ್ತಿದೆ. ಅರಣ್ಯ ಪ್ರದೇಶವನ್ನು ನೂರಕ್ಕೆ ನೂರು ರಕ್ಷಣೆ ಮಾಡುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿ" ಎಂದರು.

"40-50 ವರ್ಷಗಳಿಂದ ರೈತರು ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಇಲಾಖೆ ಅನುಮತಿ ಪಡೆಯಲು ಕಷ್ಟಪಡುತ್ತಿದ್ದಾರೆ. ಅರಣ್ಯದೊಳಗೆ ಮತ್ತು ಅಂಚಿನಲ್ಲಿರುವ ಮೂಲನಿವಾಸಿಗಳು, ಆದಿವಾಸಿಗಳು, ಜೇನುಕುರುಬರು ಸೇರಿದಂತೆ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ. ಅರಣ್ಯ ಇಲಾಖೆಗೆ ಹೇಳುವುದಿಷ್ಟೇ - It is the quality of the forest, not the quantity of the forest. ಅರಣ್ಯ ಪ್ರದೇಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ರೈತರ ರಕ್ಷಣೆಗೆ ಸದಾ ನಿಲ್ಲುತ್ತೇನೆ" ಎಂದು ಭರವಸೆ ನೀಡಿದರು.

ರೈತರ ಪರವಾಗಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯವನ್ನು ಸ್ವಾಗತಿಸುತ್ತೇನೆ. ವರದಿ ತಿರಸ್ಕರಿಸಿದ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು, ರೈತರ ಹಿತವೇ ನಮ್ಮ ಆದ್ಯತೆ ಎಂದರು.

--