ಕೊಡಗಿನಲ್ಲಿ ಕನ್ನಡ ತೇರು ಎಳೆದ ಕೇಶವ ಕಾಮತ್ ಅವರಿಗೆ ಅರಮೇರಿ ಕಳಂಚೇರಿ ಮಠದಲ್ಲಿ ಸನ್ಮಾನ
admincoorgdaily

ವಿರಾಜಪೇಟೆ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರಾದ ಕೇಶವ ಕಾಮತ್ ಅವರನ್ನು ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದ ಅರಮೇರಿ ಕಳಂಚೇರಿ ಮಠದ ಆವರಣದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೇಶವ ಕಾಮತ್ ಅವರ ಅಧಿಕಾರಾವಧಿಯು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಗೌರವ ಸಮರ್ಪಣೆ ನಡೆಯಿತು.
ತಮ್ಮ ಅಧಿಕಾರಾವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಿ, ಯಶಸ್ವಿಯಾಗಿ 'ಕನ್ನಡ ತೇರು' ಎಳೆದಿದ್ದಾರೆ. ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದು ಶ್ಲಾಘಿಸಿ ಶ್ರೀಗಳು ಕೇಶವ ಕಾಮತ್ ಅವರಿಗೆ ಆಶೀರ್ವದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರಾದ ತಿಮ್ಮಪ್ಪಯ್ಯ, ಆಶಾ ತಿಮ್ಮಪ್ಪಯ್ಯ, ಶ್ರೀಕಾಂತ್ ರಾವ್, ಡಾ. ಎಸ್.ವಿ. ನರಸಿಂಹನ್, ರಜಿತ ಕಾರ್ಯಪ್ಪ, ಡಿ. ಮಂಜುನಾಥ್, ಚಂದನ್ ಕಾಮತ್, ಹೆಡತಲೆ ನಾರಾಯಣ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.