ಮಾಜಿ ಸೈನಿಕರ ಸಮಸ್ಯೆ ಪರಿಹಾರಕ್ಕೆ ಕಿಗ್ಗಟ್ ನಾಡ್ ಸಂಘ ಬದ್ಧ: ಅಧ್ಯಕ್ಷ ಐನಂಡ ಮಂದಣ್ಣ
admincoorgdaily

ಪೊನ್ನಂಪೇಟೆ, ಅ.5: ಮಾಜಿ ಸೈನಿಕರು, ಕುಟುಂಬ ಪಿಂಚಣಿದಾರರು ಹಾಗೂ ಅವಲಂಬಿತ ಪಿಂಚಣಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ, ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನಂ 64 ಕಿಗಟ್ಟ್ ನಾಡ್ ಮಾಜಿ ಸೈನಿಕರ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಐನಂಡ ಕೆ ಮಂದಣ್ಣ ಹೇಳಿದರು.
ಪೊನ್ನಂಪೇಟೆಯಲ್ಲಿ ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘ 2013ರಲ್ಲಿ ಸ್ಥಾಪನೆಯಾಗಿದ್ದು ಪ್ರಸ್ತುತ 521 ಸದಸ್ಯರಿದ್ದು, ಸದಸ್ಯರಿಗಾಗಿ ಮರಣ ನಿಧಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ವಾರಸುದಾರರಿಗೆ ರೂ.15 ಸಾವಿರ ನೆರವು ನೀಡಲಾಗುತ್ತಿದೆ. ಸದಸ್ಯರ ಪಾಲು ಹಣ ಹಾಗೂ ಮರಣ ನಿಧಿ ವಂತಿಗೆಯ ಬಡ್ಡಿ ಹಣದಿಂದ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸಂಘದ ಪ್ರಮುಖ ಉದ್ದೇಶ ಮಾಜಿ ಸೈನಿಕರನ್ನು ಹಾಗೂ ಅರೆಕಾಲಿಕ ಸೈನಿಕರನ್ನು ಒಂದೇ ವೇದಿಕೆಯಡಿ ಸಂಘಟಿಸುವುದು, ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಮತ್ತು ಪಿಂಚಣಿ, ಕುಟುಂಬ ಪಿಂಚಣಿ, ಅವಲಂಬಿತ ಪಿಂಚಣಿ ಹಾಗೂ ಸ್ಪರ್ಶ್ ಪಿಂಚಣಿ ವ್ಯವಸ್ಥೆಯಲ್ಲಿರುವ ತಾರತಮ್ಯಗಳನ್ನು ಸರಿಪಡಿಸಲು ನೆರವಾಗುವುದಾಗಿದೆ ಎಂದು ಅವರು ಹೇಳಿದರು.
163 ಮಂದಿಯ ಸಮಸ್ಯೆ ಪರಿಹಾರ
2025-26ನೇ ಸಾಲಿನಲ್ಲಿ ಮಾಜಿ ಸೈನಿಕರು ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದ 163 ಕುಂದುಕೊರತೆಗಳನ್ನು ಪರಿಹರಿಸಲು ಸಂಘ ಯಶಸ್ವಿಯಾಗಿದೆ. ಸಂಘದ ಸೇವೆಗೆ ಮಾಜಿ ಯೋಧರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಘದ ಕಚೇರಿ ನಡೆಸಲು ಪೊನ್ನಂಪೇಟೆಯ ಎಪಿಸಿಎಂಎಸ್ ವತಿಯಿಂದ ಬಾಡಿಗೆ ರಹಿತ ಕೊಠಡಿ ಒದಗಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಂಘಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡ ಒದಗಿಸುವಂತೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ,ಜಿಲ್ಲಾಧಿಕಾರಿ ಹಾಗೂ ಪೊನ್ನಂಪೇಟೆ ತಾಲೂಕು ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಪೊನ್ನಂಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಕಟ್ಟಡ ದೊರೆಯುವ ಭರವಸೆ ಇದೆ ಎಂದರು ಹೇಳಿದರು.
ಸಮುದಾಯ ಭವನಕ್ಕೆ ಮನವಿ
2026 ರ ಏಪ್ರಿಲ್ 7ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಾಜಿ ಸೈನಿಕರ ಅದಾಲತ್‌ನಲ್ಲಿ ಜಿಲ್ಲಾಧಿಕಾರಿಗಳು ಮಾಜಿ ಸೈನಿಕರಿಗೆ ಪೊನ್ನಂಪೇಟೆಯಲ್ಲಿ ಸಮುದಾಯ ಭವನ ಒದಗಿಸುವ ಭರವಸೆ ನೀಡಿದ್ದರು. ಈ ಭರವಸೆಯನ್ನು ಈಡೇರಿಸಿ ಸಮುದಾಯ ಭವನ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯಾನಿಧಿ ಸ್ಥಾಪನೆ
ಸದಸ್ಯ ದಾನಿಗಳಿಂದ ದೊರೆಯುವ ನೆರವಿನಿಂದ ವಿದ್ಯಾನಿಧಿ ಸ್ಥಾಪಿಸಲಾಗಿದ್ದು, ಸಂಘದ ಸದಸ್ಯರ ಮಕ್ಕಳು ಹಾಗೂ ಮೊಮ್ಮಕ್ಕಳ ಪೈಕಿ 10ನೇ ತರಗತಿ, ಪಿಯುಸಿ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಾರ್ಷಿಕ ಮಹಾಸಭೆಯಂದು ಉಚಿತ ಆಯುರ್ವೇದ ಶಿಬಿರ
ಸಂಘದ 13ನೇ ವಾರ್ಷಿಕ ಮಹಾಸಭೆ ಅ.8ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ 9.30ರಿಂದ ಮಾಜಿ ಸೈನಿಕರಿಗಾಗಿ ನುರಿತ ಆಯುರ್ವೇದ ತಜ್ಞರಿಂದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಮಾಜಿ ಸೈನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಪೊನ್ನಂಪೇಟೆ ತಾಲೂಕಿಗೆ ಇಸಿಎಚ್‌ಎಸ್, ಸಿಎಸ್‌ಡಿ ಕ್ಯಾಂಟೀನ್‌ಗೆ ಬೇಡಿಕೆ
ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಸೇರಿದಂತೆ ದೂರದ ಪ್ರದೇಶಗಳಲ್ಲಿ ವಾಸಿಸುವ ವಯೋವೃದ್ಧ ಹಾಗೂ ಅಂಗವಿಕಲ ಮಾಜಿ ಸೈನಿಕರು ಮತ್ತು ಪಿಂಚಣಿದಾರರಿಗೆ ವಿರಾಜಪೇಟೆಯಲ್ಲಿರುವ ಇಸಿಎಚ್‌ಎಸ್ ಹಾಗೂ ಸಿಎಸ್‌ಡಿ ಕ್ಯಾಂಟೀನ್ ಸೌಲಭ್ಯ ಪಡೆಯಲು ಸುಮಾರು 80 ಕಿ.ಮೀ. ಪ್ರಯಾಣಿಸಬೇಕಾಗಿದೆ. ಇದರಿಂದ ತೊಂದರೆಯಾಗುತ್ತಿದ್ದು, ಪೊನ್ನಂಪೇಟೆ, ಗೋಣಿಕೊಪ್ಪ ಅಥವಾ ಹುದಿಕೇರಿ ಭಾಗದಲ್ಲಿ ಸರ್ಕಾರದಿಂದ ನಿವೇಶನ ಒದಗಿಸಿ, ಪೊನ್ನಂಪೇಟೆ ತಾಲೂಕಿಗೆ ಪ್ರತ್ಯೇಕ ಇಸಿಎಚ್‌ಎಸ್ ಕೇಂದ್ರ ಹಾಗೂ ಸಿಎಸ್‌ಡಿ ಕ್ಯಾಂಟೀನ್ ಮಂಜೂರು ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಕೊಡಗು ವಿಶ್ವವಿದ್ಯಾಲಯಕ್ಕೆ ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಹೆಸರನ್ನು ಇಡಬೇಕೆಂದು ಮಾಜಿ ಸೈನಿಕರ ಸಂಘದ ವತಿಯಿಂದ ಈಗಾಗಲೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ ಹಾಗೂ ಕೊಡಗಿನ ಇಬ್ಬರು ಶಾಸಕರುಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಗಿದೆ, ಅದರಂತೆ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಸಂಘದ 13ನೇ ವಾರ್ಷಿಕ ಮಹಾಸಭೆಗೆ ಮಾಜಿ ಸೈನಿಕರು , ಅರೆಕಾಲಿಕ ಸೈನಿಕರು ಹಾಗೂ ಅವರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭ ಉಪಾಧ್ಯಕ್ಷ ಸಿ.ಎಂ ರಮೇಶ್, ಗೌರವ ಕಾರ್ಯದರ್ಶಿ ಪಿ.ಎ. ಶ್ಯಾಂಪ್ರಸಾದ್, ಖಜಾಂಚಿ ಐ.ಕೆ. ತಮ್ಮಯ್ಯ,ಜಂಟಿ ಕಾರ್ಯದರ್ಶಿಗಳಾದ ಬಿ.ಎನ್. ಬೆಳ್ಳಿಯಪ್ಪ ಹಾಗೂ ಎ.ಟಿ. ಮುತ್ತಪ್ಪ, ಆಂತರಿಕ ಲೆಕ್ಕ ಪರಿಶೋಧಕರಾದ ಸಿ.ಎ. ಮಾದಪ್ಪ, ನಿರ್ದೇಶಕರಾದ ಬಿ.ಬಿ. ಜನಕ, ಎಂ.ಎಸ್. ಮುತ್ತಣ್ಣ, ಎ.ಸಿ. ಸೋಮಯ್ಯ, ಬಿ.ಎಸ್. ಚಂದ್ರಶೇಖರ್ ಹಾಗೂ ಹೆಚ್.ಇ. ಕೃಷ್ಣ ಉಪಸ್ಥಿತರಿದ್ದರು.