Kodagu

ಕಿತ್ತೂರು ರಾಣಿ ಚೆನ್ನಮ್ಮರ ತ್ಯಾಗ ಮತ್ತು ಶೌರ್ಯದ ಬದುಕು ಎಲ್ಲರಿಗೂ ಆದರ್ಶ: ಪುದಿಯನೆರವನ ರೇವತಿ ರಮೇಶ್

admincoorgdaily

ಕಿತ್ತೂರು ರಾಣಿ ಚೆನ್ನಮ್ಮರ ತ್ಯಾಗ ಮತ್ತು ಶೌರ್ಯದ ಬದುಕು ಎಲ್ಲರಿಗೂ ಆದರ್ಶ: ಪುದಿಯನೆರವನ ರೇವತಿ ರಮೇಶ್
ಮಡಿಕೇರಿ:-ಬ್ರಿಟಿಷರ ಆಡಳಿತದ ವಿರುದ್ಧ ಪ್ರಥಮ ಬಾರಿಗೆ ಕಹಳೆ ಮೊಳಗಿಸಿ, ಮಾತೃಭೂಮಿಯ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮರ ಜೀವನ ಮತ್ತು ಶೌರ್ಯದ ಪಯಣ ಪ್ರತಿಯೊಬ್ಬರಿಗೂ ಸದಾ ಆದರ್ಶಪ್ರಾಯವಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷರಾದ ಪುದಿಯನೆರವನ ರೇವತಿ ರಮೇಶ್ ತಿಳಿಸಿದರು. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ಕಿತ್ತೂರು ಸಂಸ್ಥಾನದ ಶೌರ್ಯದ ಸಂಕೇತವಾಗಿರುವ ರಾಣಿ ಚೆನ್ನಮ್ಮನವರ ವೀರಗಾಥೆಯು ಇಂದಿನ ಯುವ ಪೀಳಿಗೆಗೆ ದೇಶಪ್ರೇಮ, ಧೈರ್ಯ ಮತ್ತು ಸ್ವಾಭಿಮಾನದ ದೊಡ್ಡ ಪಾಠವಾಗಿದೆ. ರಾಣಿ ಚೆನ್ನಮ್ಮ ಕೇವಲ ಒಂದು ಪ್ರದೇಶದ ರಾಣಿಯಾಗಿರದೆ, ಇಡೀ ಭಾರತೀಯ ನಾರೀಶಕ್ತಿಯ ಹಾಗೂ ಸ್ವಾತಂತ್ರ್ಯ ಹೋರಾಟದ ದಿವ್ಯ ಜ್ಯೋತಿಯಾಗಿದ್ದಾರೆ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಪ್ರಥಮ ಬಾರಿಗೆ ಸಮರ ಸಾರಿದ ದೇಶದ ಮೊಟ್ಟಮೊದಲ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು, ಪತಿ ಮತ್ತು ಪುತ್ರನನ್ನು ಕಳೆದುಕೊಂಡರು ಯಾವುದಕ್ಕೂ ಎದೆಗುಂದದೆ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ರಾಣಿ ಚೆನ್ನಮ್ಮರು ಕನ್ನಡಮ್ಮನ ಮಗಳು ಎಂದು ಹೇಳಿದರು. 

ಮಾತೃಭೂಮಿಯ ರಕ್ಷಣೆ ಮತ್ತು ನಾಡಿನ ಸ್ವಾಭಿಮಾನಕ್ಕಾಗಿ ಬ್ರಿಟಿಷರ ವಿರುದ್ಧವೇ ದಿಟ್ಟತನದಿಂದ ರಣರಂಗಕ್ಕಿಳಿದ ಕಿತ್ತೂರು ರಾಣಿ ಚೆನ್ನಮ್ಮರ ಶೌರ್ಯ ಮತ್ತು ಸಾಹಸಮಯ ಹೋರಾಟವು ಇಂದಿಗೂ ಇಡೀ ಭಾರತಕ್ಕೆ ಕ್ರಾಂತಿಯ ಕಿಡಿಯಾಗಿದೆ. ರಣರಂಗದಲ್ಲಿ ಖಡ್ಗ ಹಿಡಿದು ಶತ್ರುಪಡೆಗಳನ್ನು ಸೀಳಿ ಬೆಳೆದ ಅವರ ದಿಟ್ಟ ನಾಯಕತ್ವವು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿದೆ ಎಂದು ತಿಳಿಸಿದರು.  

ನಾಡಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಅವರ ತಪೆÇೀಮಯ ಬದುಕು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿದೆ. ಚೆನ್ನಮ್ಮನವರ ಆದರ್ಶ, ತ್ಯಾಗ ಮತ್ತು ದೇಶಪ್ರೇಮದ ಮೌಲ್ಯಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು. 
ಮಡಿಕೇರಿ ತಹಶೀಲ್ದಾರರಾದ ಗುರುರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಶುಭಕೋರಿದರು. ಕಾರ್ಯಕ್ರಮದ ಮುನ್ನ ಗಣ್ಯರು ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.  

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಪ್ರೇಮ ಕೃಷ್ಣಪ್ಪ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯರಾದ ಪ್ರೇಮ ರಾಘವಯ್ಯ, ಮಹಿಳಾ ಸಹಕಾರ ಸಂಘದ ಸದಸ್ಯರಾದ ಸುಶೀಲ ವಾಸುದೇವ, ಬ್ಲಾಸಂ ಶಾಲೆಯ ಶಿಕ್ಷಕರು ಇದ್ದರು. 
ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ವಂದೇ ಮಾತರಂ ಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.