ಕೊಡಗು ಅಹಿಂದ ಬಳಗದಿಂದ ಸಿದ್ದರಾಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ : ಅಹಿಂದ ವರ್ಗದವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಮನವಿ
admincoorgdaily


ಮಡಿಕೇರಿ ನ.19 : ಕೊಡಗು ಅಹಿಂದ ಬಳಗದ ನಿಯೋಗ ಬಳಗದ ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ಅವರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಸರ್ಕಾರಿ ಅತಿಥಿಗೃಹ ಕಾವೇರಿಯಲ್ಲಿ ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚಿಸಿತು.
ಕೊಡಗು ಜಿಲ್ಲೆಯಲ್ಲಿ ಅಹಿಂದ ಬಳಗವನ್ನು ಬಲವಾಗಿ ಸಂಘಟಿಸುವುದು ಹಾಗೂ ಅಹಿಂದ ಸಂಘಟನೆಯ ಅನಿವಾರ್ಯತೆ ಮತ್ತು ಅವಶ್ಯಕತೆ ಕುರಿತು ಮುಖಂಡರು ಗಮನ ಸೆಳೆದರು.
ಜಿಲ್ಲೆಯಲ್ಲಿ ಅಹಿಂದ ವರ್ಗದವರು ರಾಜಕೀಯವಾಗಿ ಕಡೆಗಣಿಸಲ್ಪಡುತ್ತಿರುವುದು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದಿರುವುದು, ಸರ್ಕಾರದ ನಾಮನಿರ್ದೇಶಿತ ಹುದ್ದೆಗಳು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿಯೂ ಅಹಿಂದ ವರ್ಗದವರಿಗೆ ಅವಕಾಶ ಕಲ್ಪಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಉಳಿದ ಅವಧಿಯಲ್ಲಿ ಅಹಿಂದ ವರ್ಗದ ಅರ್ಹ ಮುಖಂಡರಿಗೆ ನಾಮನಿರ್ದೇಶಿತ ಹುದ್ದೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಸೂಕ್ತ ಅವಕಾಶ ಮತ್ತು ಸ್ಥಾನಮಾನ ಕಲ್ಪಿಸಬೇಕೆಂದು ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮೈಸೂರಿನ ಅಹಿಂದ ಮುಖಂಡ ಕೆ.ಎಸ್.ಶಿವರಾಮು, ಕರ್ನಾಟಕ ರಾಜ್ಯ ಲ್ಯಾಂಪ್ ಸೊಸೈಟಿ ಮಹಾಮಂಡಲದ ಅಧ್ಯಕ್ಷ ಅರುಣ್ ರಾವ್ ರಾಜಾರಾವ್, ಅಹಿಂದ ಬಳಗ ಕೊಡಗು ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರವಿ ಅಜ್ಜಳ್ಳಿ, ಪ್ರಧಾನ ಕಾರ್ಯದರ್ಶಿ ಟಿ.ಈ.ಸುರೇಶ್, ಸಮಿತಿ ಸದಸ್ಯರಾದ ಕೂಡಿಗೆಯ ಮಂಜು ಹಾಗೂ ಹೊಸತೋಟದ ಕೊಯಾ ಹಾಜರಿದ್ದರು.