ಹಿರಿಯರ ತ್ಯಾಗದಿಂದ ಕೊಡಗಿನ ಸಹಕಾರಿ ಕ್ಷೇತ್ರ ದೇಶಕ್ಕೇ ಮಾದರಿ;ರಾಬಿನ್ ದೇವಯ್ಯ
admincoorgdaily

ವಿರಾಜಪೇಟೆ: ಹಿರಿಯರ ತ್ಯಾಗ ಮತ್ತು ನಿಸ್ವಾರ್ಥ ಮನೋಭಾವದಿಂದ ಕೊಡಗಿನ ಸಹಕಾರಿ ಕ್ಷೇತ್ರ ಉನ್ನತ ಸ್ಥಾನದಲ್ಲಿದ್ದು, ದೇಶಕ್ಕೇ ಮಾದರಿಯಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು.ರಾಬಿನ್ ದೇವಯ್ಯ ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಈಶ್ವರಿ ಬಾಡಗ ಸಹಕಾರ ದವಸ ಭಂಡಾರ ಹಾಗೂ ಪೊದಕೇರಿ ಸಹಕಾರ ದವಸ ಭಂಡಾರ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 73ನೇ ಸಹಕಾರ ಸಪ್ತಾಹದ ಅಂಗವಾಗಿ ಸಾರ್ವಜನಿಕ, ಖಾಸಗಿ ಮತ್ತು ಸಹಕಾರಿ ಪಾಲುದಾರಿಕೆ ಬಲಪಡಿಸುವ ದಿನಾಚರಣೆಯನ್ನು ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಥಮ ಬಾರಿಗೆ 1905 ರಲ್ಲಿ ಗದಗದಲ್ಲಿ ಸಹಕಾರಿ ಸಂಘ ಆರಂಭಗೊಂಡಿತು. ಇದೇ ವರ್ಷ ಮೇ 22 ರಂದು ಎರಡನೇ ಸಂಘ ಕೊಡಗು ಜಿಲ್ಲೆಯ ತಲ್ತರೆ ಶೆಟ್ಟಳ್ಳಿಯಲ್ಲಿ ಕಾರ್ಯ ಆರಂಭಿಸಿತು. ಇದು ಕೊಡಗು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
ಪೊದಕೇರಿ, ವಿ.ಬಾಡಗ ಮತ್ತು ರುದ್ರುಗುಪ್ಪೆ ಸಂಘಗಳು 1976 ರಲ್ಲಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ವಿಲೀನಗೊಂಡಿತು. ಅಂದಿನಿಂದ ಇಂದಿನವರೆಗೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಸಂಘ ಕೃಷಿ ಹಾಗೂ ಕೃಷಿಯೇತರ ಸಾಲವನ್ನು ನೀಡುತ್ತಾ ಲಾಭದ ಹಾದಿಯಲ್ಲಿ ಸಾಗಿದೆ. ಈ ಯಶಸ್ಸಿಗೆ ಸರ್ವ ಹಿರಿಯ ಸಹಕಾರಿಗಳು ಹಾಗೂ ಕೃಷಿಕರು ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.
ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಿದ ಹಾಗೂ ಜಾಗವನ್ನು ಉದಾರವಾಗಿ ನೀಡಿದ ಹಿರಿಯ ಸಹಕಾರಿಗಳಿಗೆ ನಾವು ಚಿರಋಣಿಗಳಾಗಿರಬೇಕು ಎಂದು ರಾಬಿನ್ ದೇವಯ್ಯ ಕರೆ ನೀಡಿದರು.
ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅವರು ಸಹಕಾರ ಕ್ಷೇತ್ರದಲ್ಲಿ ಎಲ್ಲಾ ಸದಸ್ಯರ ಸಹಭಾಗಿತ್ವ ಅಗತ್ಯ, ಕೇವಲ ಸಾಲ ಪಡೆಯುವುದಕ್ಕೆ ಮಾತ್ರ ಸಂಘಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಜಿಲ್ಲೆಯಲ್ಲಿ ಹಿರಿಯರು ಪರಿಶ್ರಮದಿಂದ ಕಟ್ಟಿಬೆಳೆಸಿದ ಸಹಕಾರಿ ಕ್ಷೇತ್ರವನ್ನು ಉಳಿಸಿಕೊಂಡು ಪ್ರಗತಿಪಥದತ್ತ ಸಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಹಕಾರಿ ಕ್ಷೇತ್ರದ ಸಾಧಕ ಬಾಧಕಗಳ ಕುರಿತು ಸದಸ್ಯರು ಮನವರಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ದಿನದ ಮಹತ್ವದ ಕುರಿತು ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಹಾಗೂ ಮಡಿಕೇರಿಯ ಕೆಐಸಿಎಂನ ನಿವೃತ್ತ ಪ್ರಾಂಶುಪಾಲೆ ಶ್ಯಾಮಲಾ ಎಂ.ಎ. ಸಹಕಾರ ಕ್ಷೇತ್ರದ ಬೆಳವಣಿಗೆ, ಸಾರ್ವಜನಿಕ ಮತ್ತು ಖಾಸಗಿ ವಲಯಗಳೊಂದಿಗೆ ಸಹಕಾರಿ ಸಂಸ್ಥೆಗಳ ಪಾಲುದಾರಿಕೆಯನ್ನು ಬಲಪಡಿಸುವ ಅಗತ್ಯದ ಕುರಿತು ಗಮನ ಸೆಳೆದರು.
ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸದಸ್ಯರು ಪಾಲ್ಗೊಳ್ಳಬೇಕು. ಸಹಕಾರ ಸಂಘಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಪೈಪೋಟಿಗಳನ್ನು ಎದುರಿಸಬೇಕು. ಸಂಘಗಳು ಕೃಷಿ ಮತ್ತು ರೈತಪರವಾದ ವಿವಿಧ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಹಕಾರ ಕ್ಷೇತ್ರ ಯಾವುದೇ ಆತಂಕವಿಲ್ಲದೆ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಈಶ್ವರಿ ಬಾಡಗ ಸಹಕಾರ ದವಸ ಭಂಡಾರದ ಅಧ್ಯಕ್ಷ ಅಮ್ಮಣಿಚಂಡ ಜಿ.ರಂಜು ಅವರು ಸಂಘದ ಪ್ರಗತಿ ಮತ್ತು ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ನಿರ್ದೇಶಕರುಗಳಾದ ಅಜ್ಜಿನಿಕಂಡ ಎಸ್.ಶ್ಯಾಂಚಂದ್ರ, ಅಡ್ಡಂಡ ಸಿ.ಕುಶಾಲಪ್ಪ, ಅಜ್ಜಿಕುಟ್ಟಿರ ಎಂ.ಮುತ್ತಪ್ಪ, ಮೂಕಚಂಡ ಟಿ.ಸುಬ್ಬಯ್ಯ, ಹೊಟ್ಟೇಂಗಡ ಎಂ.ರಮೇಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನಿರ್ದೇಶಕರುಗಳಾದ ಕುಂಞಂಗಡ ಅರುಣ್ ಭೀಮಯ್ಯ, ಎಸ್.ಆರ್.ಸುನಿಲ್ ರಾವ್, ಪೂಳಂಡ ಪಿ.ಪೆಮ್ಮಯ್ಯ, ಗುಮ್ಮಟ್ಟಿರ ಎಸ್.ಕಿಲನ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ವಿರಾಜಪೇಟೆ ತಾಲ್ಲೂಕು ಸಹಕಾರ ಕೂಟದ ಅಧ್ಯಕ್ಷ ಅಲೆಮಾಡ ಡಿ.ಸುಧೀರ್, ಪೊದಕೇರಿ ಸಹಕಾರ ದವಸ ಭಂಡಾರದ ಅಧ್ಯಕ್ಷ ಕಂಜಿತಂಡ ಕೆ.ಮಂದಣ್ಣ ಹಾಗೂ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಬಲ್ಲಡಿಚಂಡ ಎಸ್.ಸೀತಮ್ಮ ಮೂಕಚಂಡ ಟಿ.ಸುಬ್ಬಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಕೊಂಗಂಡ ಪಿ.ಮುದ್ದಯ್ಯ, ಮೂಕಚಂಡ ಟಿ.ಸುಬ್ಬಯ್ಯ, ಕೊಂಗಂಡ ಎಂ.ದೇವಯ್ಯ, ಮುಲ್ಲೇಂಗಡ ಎಸ್.ಪೊನ್ನಪ್ಪ, ಕೋಲತಂಡ ಯು.ಮಾಚಯ್ಯ, ತೀತಿಮಾಡ ಜೆ.ಅಯ್ಯಪ್ಪ, ಮೇಚಿಯಂಡ ಎಂ.ಪ್ರಭಾ ಹಾಗೂ ಮೂಕಚಂಡ ಡಿ.ಕಾವೇರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತರು ಸಹಕಾರಿ ಕ್ಷೇತ್ರ ಬೆಳೆದು ಬಂದ ರೀತಿ ಮತ್ತು ಹಿರಿಯರ ಪರಿಶ್ರಮದ ಕುರಿತು ಅನುಭವ ಹಂಚಿಕೊಂಡರು.