Kodagu

ಎಸ್.ಕೆ.ವೀರಪ್ಪಗೆ ಕೊಡಗು ಸಹಕಾರ ರತ್ನ ಪ್ರಶಸ್ತಿ

admincoorgdaily

ಎಸ್.ಕೆ.ವೀರಪ್ಪಗೆ ಕೊಡಗು ಸಹಕಾರ ರತ್ನ ಪ್ರಶಸ್ತಿ
ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನಿಂದ ನೀಡಲಾಗುವ ಕೊಡಗು ಸಹಕಾರ ರತ್ನ ಪ್ರಶಸ್ತಿಯನ್ನು ಸಂಪಿಗೆದಾಳು ಗ್ರಾಮದ ಎಸ್.ಕೆ.ವೀರಪ್ಪ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ತಿಳಿಸಿದ್ದಾರೆ.

ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಪಿ.ಮುದ್ದಯ್ಯ ಹಾಗೂ ಮುಗುಟಗೇರಿ ಗ್ರಾಮದ ಮುದ್ದಿಯಡ ಎ.ಸೋಮಯ್ಯ ಅವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ ಹಾಗೂ ತಾಕೇರಿ ಗ್ರಾಮದ ಲೋಕೇಶ್ವರಿ ಗೋಪಾಲ್ ಅವರಿಗೆ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನ.೧೪ರಿಂದ ೨೦ರವರೆಗೆ ೭೩ನೇ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ನ.೧೪ರಂದು ಕಾರುಗುಂದದಲ್ಲಿ ಚಾಲನೆ ನೀಡಲಾಗುವುದು. ನ.೧೫ರಂದು ಮಹಿಳಾ ಸಹಕಾರ ಬ್ಯಾಂಕ್ ಮಡಿಕೇರಿ, ನ.೧೬ರಂದು ಹುದಿಕೇರಿ, ನ.೧೭ರಂದು ಶಾಂತಳ್ಳಿ, ನ.೧೮ರಂದು ರುದ್ರುಗುಪ್ಪೆ, ನ.೧೯ರಂದು ತೊರೆನೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. 

ನ.೨೦ರಂದು ಮಡಿಕೇರಿಯ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಣಪತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರು, ಸಂಸದರು ಸನ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೆ.ಪಿ.ಗಣಪತಿ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಯೂನಿಯನ್‌ನ ಉಪಾಧ್ಯಕ್ಷ ಮಾದಪ್ಪ, ನಿರ್ದೇಶಕರಾದ ಎಂ.ಟಿ.ಸುಬ್ಬಯ್ಯ, ಬಲ್ಲಾರಂಡ ಮಣಿಉತ್ತಪ್ಪ ಇದ್ದರು.