ಹಾಕತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಕೊಡಗು ಜಿಲ್ಲಾ ಸಮಸ್ತ ಸೆಂಟಿನರಿ ಅಸೆಂಬ್ಲಿ ಸಮಾವೇಶ
admincoorgdaily

ನಾಪೋಕ್ಲು :"ಪ್ರಕಾಶಮಾನ 100 ವರ್ಷಗಳು" ಎಂಬ ಘೋಷವಾಕ್ಯದೊಂದಿಗೆ ಸಮಸ್ತ ಸೆಂಟಿನರಿ ಆಚರಣೆಯ ಸಮಾರೋಪ ಸಮಾರಂಭವು 2027ರ ಜನವರಿ 28ರಿಂದ 31ರವರೆಗೆ ಕೇರಳದ ಮಲಪ್ಪುರಂನ ವಾದಿ ಹರಮೈನಿಯಲ್ಲಿ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ ಕೊಡಗು ಜಿಲ್ಲಾ ಸಮಸ್ತ ಸೆಂಟಿನರಿ ಅಸೆಂಬ್ಲಿ ಸಮಾವೇಶವನ್ನು ಹಾಕತ್ತೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಕೊಡಗು ಜಿಲ್ಲಾ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ ನೇತೃತ್ವದಲ್ಲಿ ಹಾಕತ್ತೂರು ಮುಸ್ಲಿಂ ಜಮಾಅತ್ ಅಧೀನದ ಸಭಾಂಗಣದಲ್ಲಿ ನಡೆದ ಅಸೆಂಬ್ಲಿಯ ಅಧ್ಯಕ್ಷತೆಯನ್ನು ಕೂರ್ಗ್ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಅಲ್ ಐದರೂಸಿ ಕಿಲ್ಲೂರು ತಂಙಳ್ ವಹಿಸಿದ್ದರು.
ಕೂರ್ಗ್ ಜಂಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವಿರಾಜಪೇಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಮುಖ ವಾಗ್ಮಿ ಸುಲೈಮಾನ್ ಸಖಾಫಿ ಮಾಳಿಯೇಕಲ್ ಅವರು ವಿಶೇಷ ತರಗತಿ ನಡೆಸಿಕೊಟ್ಟರು. ಸಮಸ್ತವು ಸ್ಥಾಪನೆಯಾದ ಮೂಲ ಸಿದ್ಧಾಂತದ ಆಧಾರದಲ್ಲಿ ಸುಲ್ತಾನುಲ್ ಉಲಮಾ ಶೈಖುನಾ ಡಾ.ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಸಮಸ್ತದ ಶತಮಾನೋತ್ಸವದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ನ ರಾಜ್ಯ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು ಅವರು ಮಾತನಾಡಿ, ಸೆಂಟಿನರಿ ಆಚರಣೆಯ ಅಂಗವಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಸಿರಾಜ್ ದೈನಿಕದ ಚಂದಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕೊಡಗು ಸುನ್ನೀ ಸಂಯುಕ್ತ ಜಮಾಅತ್ ಪ್ರತಿನಿಧಿ ಸಿ.ಕೆ. ಅಹ್ಮದ್ ಮುಸ್ಲಿಯಾರ್, ಎಸ್ವೈಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ ಹಾಗೂ ಎಸ್ಎಸ್ಎಫ್ ಜಿಲ್ಲಾ ಅಧ್ಯಕ್ಷ ಕಮರುದ್ದೀನ್ ಸಖಾಫಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎಸ್ವೈಎಸ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು,ಎಸ್ವೈಎಸ್ ಕೊಡಗು ಜಿಲ್ಲಾ ಸದಸ್ಯ ಸಯ್ಯಿದ್ ಮಹ್ದೀ ಅಹ್ಮದ್ ಅಲ್ ಬುಖಾರಿ ತಂಙಳ್ ಚೋಕಂಡಹಳ್ಳಿ,ಕೊಡಗು ಸುನ್ನೀ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಮೊಯ್ದೀನ್ ಕುಟ್ಟಿ ಹಾಜಿ ಕೊಳಕೇರಿ ಹಾಗೂ ಹಂಸ ಕೊಟ್ಟಮುಡಿ ಸೇರಿದಂತೆ ಜಿಲ್ಲೆಯ ಉಲಮಾ ಮತ್ತು ಉಮರಾ ನಾಯಕರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್, ಎಸ್ಎಸ್ಎಫ್, ಜಂಇಯ್ಯತ್ತುಲ್ ಉಲಮಾ, ಜಂಇಯ್ಯತ್ತುಲ್ ಮುಅಲ್ಲಿಮೀನ್, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಹಾಗೂ ಸುನ್ನೀ ಸಂಯುಕ್ತ ಜಮಾಅತ್ ಸೇರಿದಂತೆ ವಿವಿಧ ಸಂಘಟನೆಗಳ ಸುಮಾರು 300 ಆಯ್ದ ಕಾರ್ಯಕರ್ತರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಕೊಳಕೇರಿ ಕಾರ್ಯಕ್ರಮ ನಿರೂಪಿಸಿದರು.ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ ಸ್ವಾಗತಿಸಿ ಸರ್ವರನ್ನು ವಂದಿಸಿದರು.
ವರದಿ :ಝಕರಿಯ ನಾಪೋಕ್ಲು