ಕೊಡವ ಅಸ್ಮಿತೆ, ಸಂಸ್ಕೃತಿ ಹಾಗೂ ಹಕ್ಕುಗಳ ರಕ್ಷಣೆಗೆ ಕೊಡವ ಯೂತ್ ಕೌನ್ಸಿಲ್ ಅಸ್ತಿತ್ವಕ್ಕೆ; ಲಾಂಛನ ಬಿಡುಗಡೆ
admincoorgdaily

ಪೊನ್ನಂಪೇಟೆ: ಕೊಡವ ಸಮುದಾಯದ ವಿಶಿಷ್ಟ ಅಸ್ಮಿತೆ, ಸಂಸ್ಕೃತಿ, ಭಾಷೆ, ಧಾರ್ಮಿಕ ಪರಂಪರೆ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಹಕ್ಕುಗಳ ಸಂರಕ್ಷಣೆಯ ಉದ್ದೇಶದಿಂದ ಕೊಡವ ಯೂತ್ ಕೌನ್ಸಿಲ್, ಕೊಡಗು ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಯುವಜನರನ್ನು ಒಗ್ಗೂಡಿಸಿ ಸಂಘಟಿತ ಶಕ್ತಿಯಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಚೀರಂಡ ಶರಣ್ ಅಯ್ಯಪ್ಪ ತಿಳಿಸಿದರು.
ತಾಲೂಕಿನ ಮುಗುಟಗೇರಿ ಗ್ರಾಮದ ಶ್ರೀ ತೊಣಕೇರಿ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಸಂಘಟನೆಯ ಲಾಂಛನ ಬಿಡುಗಡೆಗೊಳಿಸಲಾಯಿತು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಯೂತ್ ಕೌನ್ಸಿಲ್ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ನೋಂದಾಯಿತ ಸಂಘಟನೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಿದೆ ಎಂದರು.
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಸಂಘಟನಾ ಸಾಮರ್ಥ್ಯ ಬೆಳೆಸುವುದರೊಂದಿಗೆ ಕೊಡವ ಸಮುದಾಯದ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಕೊಡವ ಸಮುದಾಯದ ವಿಶಿಷ್ಟ ಇತಿಹಾಸ, ಸಂಸ್ಕೃತಿ, ಭಾಷೆ, ಧಾರ್ಮಿಕ ಪರಂಪರೆ ಹಾಗೂ ಸಾಂಪ್ರದಾಯಿಕ ಹಕ್ಕುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ಇಂದಿನ ಯುವಜನತೆಯ ಜವಾಬ್ದಾರಿಯಾಗಿದೆ. ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾದ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಧ್ವನಿ ಎತ್ತುವುದರೊಂದಿಗೆ ಅಗತ್ಯವಿದ್ದಲ್ಲಿ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಹಕ್ಕುಗಳ ರಕ್ಷಣೆಗೆ ಹೋರಾಡಲಾಗುವುದು ಎಂದು ಹೇಳಿದರು. ಸಂಘಟನೆಯಲ್ಲಿ ಸಾಂಸ್ಕೃತಿಕ ಸಮಿತಿ,ಭಾಷಾ ಸಮಿತಿ, ಶಿಕ್ಷಣ ಸಮಿತಿ,ಕ್ರೀಡಾ ಸಮಿತಿ, ಕಲ್ಯಾಣ ಸಮಿತಿ,ಪರಿಸರ ಸಮಿತಿ, ಕಾನೂನು ಅರಿವು ಸಮಿತಿ, ಹಣಕಾಸು ಸಮಿತಿ ಹಾಗೂ ಇತರೆ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಕೊಡವ ಧಾರ್ಮಿಕ ಪರಂಪರೆ, ಪವಿತ್ರ ಸ್ಥಳಗಳು, ಕೊಡವ ತಕ್ಕ್ ಭಾಷೆ, ಕೊಡವ ಲಿಪಿ, ಸಂಸ್ಕೃತಿ ಹಾಗೂ ಸಮುದಾಯದ ಸಾಂವಿಧಾನಿಕ ಹಕ್ಕುಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುವುದು. ಸಂಘಟನೆಯು ಯಾವುದೇ ವ್ಯಕ್ತಿ ಅಥವಾ ಇತರ ಸಂಘಟನೆಗಳ ವಿರುದ್ಧವಾಗಿ ಕಾರ್ಯನಿರ್ವಹಿಸುವುದಿಲ್ಲ. ಹಿರಿಯರ ಅನುಭವ ಹಾಗೂ ಯುವಜನರ ಶಕ್ತಿಯನ್ನು ಒಗ್ಗೂಡಿಸಿಕೊಂಡು ಇತರ ಕೊಡವ ಸಂಘಟನೆಗಳೊಂದಿಗೆ ಸಮನ್ವಯದಿಂದ ಮುನ್ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಯುವಜನರ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ
ಕೊಡವ ಸಂಸ್ಕೃತಿ, ಇತಿಹಾಸ, ಸಂಪ್ರದಾಯ ಮತ್ತು ಪರಂಪರೆಯ ಸಂರಕ್ಷಣೆ, ಧಾರ್ಮಿಕ ಪವಿತ್ರ ಸ್ಥಳಗಳ ರಕ್ಷಣೆ, ಕೊಡವ ತಕ್ಕ್ ಭಾಷೆ ಮತ್ತು ಲಿಪಿಯ ಅಭಿವೃದ್ಧಿ ಹಾಗೂ ಸಮುದಾಯದ ಸಾಂವಿಧಾನಿಕ ಮತ್ತು ಕಾನೂನುಬದ್ಧ ಹಕ್ಕುಗಳ ರಕ್ಷಣೆ ಸಂಘಟನೆಯ ಪ್ರಮುಖ ಆಶಯಗಳಾಗಿವೆ.
ಇದರೊಂದಿಗೆ ಯುವಜನರ ಶಿಕ್ಷಣ, ಉದ್ಯೋಗ, ನಾಯಕತ್ವ ಹಾಗೂ ಕೌಶಲ್ಯಾಭಿವೃದ್ಧಿಗೆ ಪ್ರೋತ್ಸಾಹ ನೀಡುವುದು, ಮಹಿಳಾ ಸಬಲೀಕರಣ, ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು. ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಾನೂನುಬದ್ಧ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಸದಸ್ಯತ್ವ ಅಭಿಯಾನ ಆರಂಭ;
ಸಂಘಟನೆಯ ಬೈಲಾ ಪ್ರಕಾರ 18 ವರ್ಷ ಮೇಲ್ಪಟ್ಟ ಅರ್ಹ ಕೊಡವ ಸಮುದಾಯದ ವ್ಯಕ್ತಿಗಳು ಸದಸ್ಯತ್ವ ಅಭಿಯಾನ ಈಗಾಗಲೇ ಪ್ರಾರಂಭವಾಗಿದೆ . ನಿಗದಿತ ಅರ್ಜಿ ನಮೂನೆ ಹಾಗೂ ಬೈಲಾದಲ್ಲಿ ಸೂಚಿಸಿರುವ ಅರ್ಹತೆ ಮತ್ತು ಷರತ್ತುಗಳ ಅನ್ವಯ ಸದಸ್ಯತ್ವ ನೀಡಲಾಗುವುದು.
ಸಂಘಟನೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಗುರಿಯಲ್ಲ. ಬದಲಾಗಿ ಸಮುದಾಯದ ಪರವಾಗಿ ಜವಾಬ್ದಾರಿಯಿಂದ ನಿಲ್ಲುವ, ಸಮಾಜಮುಖಿ ಚಿಂತನೆ ಹಾಗೂ ಸೇವಾ ಮನೋಭಾವ ಹೊಂದಿರುವ ಯುವಶಕ್ತಿಯನ್ನು ರೂಪಿಸುವುದು ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಆಸಕ್ತ ಯುವಜನರು ಸಂಘಟನೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಡಿ. 14ರಂದು ಭವ್ಯ ಉದ್ಘಾಟನಾ ಸಮಾರಂಭ;
ಕೊಡವ ಯೂತ್ ಕೌನ್ಸಿಲ್ ಸಂಘಟನೆಯ ಉದ್ಘಾಟನಾ ಸಮಾರಂಭವು ಡಿಸೆಂಬರ್ 14ರಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ನಡೆಯಲಿದೆ. ಅಂದು ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಕೊಡವ ಸಮಾಜದವರೆಗೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಭವ್ಯ ಮೆರವಣಿಗೆ ಆಯೋಜಿಸಲಾಗುವುದು.
ಈ ಸಮಾರಂಭವು ಕೇವಲ ಸಂಘಟನೆಯ ಉದ್ಘಾಟನೆಗೆ ಸೀಮಿತವಾಗದೆ, ಕೊಡವ ಅಸ್ಮಿತೆ, ಸಮುದಾಯದ ಒಗ್ಗಟ್ಟು ಹಾಗೂ ಯುವಶಕ್ತಿಯ ಸಂಕಲ್ಪವನ್ನು ಸಾರುವ ವೇದಿಕೆಯಾಗಲಿದೆ. ಸಮುದಾಯದ ಹಿರಿಯರು, ವಿವಿಧ ಕೊಡವ ಸಂಘಟನೆಗಳ ಪದಾಧಿಕಾರಿಗಳು, ಯುವಜನರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದಿಲ್ಲ
ಕೊಡವ ಯೂತ್ ಕೌನ್ಸಿಲ್ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಾಗಿ ಕಾರ್ಯನಿರ್ವಹಿಸುವುದಿಲ್ಲ. ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮಾರ್ಗದಲ್ಲಿ ಸಮುದಾಯದ ಹಿತಾಸಕ್ತಿಗಾಗಿ ಶ್ರಮಿಸುವುದು ಸಂಘಟನೆಯ ಬದ್ಧತೆಯಾಗಿದೆ.
ಅಧಿಕಾರ ಗಳಿಸುವುದಕ್ಕಿಂತ ಸಮುದಾಯದ ಸೇವೆ ಮಾಡುವುದು, ಸಂಘರ್ಷ ಸೃಷ್ಟಿಸುವುದಕ್ಕಿಂತ ನ್ಯಾಯಯುತ ಹಕ್ಕುಗಳನ್ನು ರಕ್ಷಿಸುವುದು ಹಾಗೂ ವ್ಯಕ್ತಿಗತ ನಾಯಕತ್ವಕ್ಕಿಂತ ಸಂಘಟಿತ ಯುವಶಕ್ತಿಗೆ ಆದ್ಯತೆ ನೀಡುವುದು ಸಂಘಟನೆಯ ಧ್ಯೇಯವಾಗಿದೆ. 'ಕೊಡವ ಅಸ್ಮಿತೆ ನಮ್ಮ ಹೆಮ್ಮೆ, ಕೊಡವ ಸಂಸ್ಕೃತಿ ನಮ್ಮ ಉಸಿರು, ಕೊಡವ ಹಕ್ಕುಗಳು ನಮ್ಮ ಬದ್ಧತೆ ಹಾಗೂ ಯುವಶಕ್ತಿ ನಮ್ಮ ಬಲ' ಎಂಬ ಧ್ಯೇಯವಾಕ್ಯದೊಂದಿಗೆ ಸಂಘಟನೆ ಮುನ್ನಡೆಯಲಿದೆ ಎಂದು ಚೀರಂಡ ಶರಣ್ ಅಯ್ಯಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷೆ ಮಲ್ಲೇಂಗಡ ಜಾಗೃತಿ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಮತ್ರಂಡ ಹರ್ಷಿತ್ ಪೂವಯ್ಯ, ಜಂಟಿ ಕಾರ್ಯದರ್ಶಿ ಕೊಕ್ಕಲೆಮಾಡ ಗೌತಮಿ, ಖಜಾಂಚಿ ಅಲೆಮಾಡ ರಿಚಿ ಕಾರ್ಯಪ್ಪ, ಸಂಘಟನಾ ಕಾರ್ಯದರ್ಶಿ ಮಾಚಂಗಡ ಸಚಿನ್ ಹಾಗೂ ನಿರ್ದೇಶಕರಾದ ಮತ್ರಂಡ ದೇಚಮ್ಮ, ಚೀಯಕಪೂವಂಡ ಶ್ರವಣ್, ಪೆಮ್ಮಂಡ ಅಂಕಿತಾ, ಕಡೇಮಾಡ ಸುಚನ್ ಸುಬ್ಬಯ್ಯ, ಬೊಟ್ಟಂಗಡ ಕೌಶಿಕ್ ಕಾವೇರಪ್ಪ ಮತ್ತು ಬೂವಕಂಡ ದೀಪ್ತಿ ಉಪಸ್ಥಿತರಿದ್ದರು.