ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ಬೇರ್ ಆಯ್ಕೆ
admincoorgdaily

ಮಡಿಕೇರಿ ಅ.8 : ಸಣ್ಣ ಭಾಷೆಗಳನ್ನು ಜೀವಂತವಾಗಿಡುವ ಉದ್ದೇಶದಿಂದ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಅ.10 ಮತ್ತು 11ರಂದು ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ಆಯೋಜಿಸಿರುವ ಸಣ್ಣ ಭಾಷಾ ಚಲನಚಿತ್ರೋತ್ಸವದಲ್ಲಿ ಕೊಡವ ಭಾಷೆಯ ಬೇರ್ ಚಿತ್ರ ಆಯ್ಕೆಯಾಗಿದೆ.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ, ಕೊಡವ ಕಾದಂಬರಿ ಆಧಾರಿತ ಬೇರ್ ಚಿತ್ರವು ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
ಅ.11ರಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನ 2ನೇ ಹಂತದಲ್ಲಿ ಬೇರ್ ಚಿತ್ರ ಪ್ರದರ್ಶನವಾಗಲಿದೆ.
ಕೂರ್ಗ್ ಕಾಫಿವುಡ್ ಮೂವೀಸ್ ನಡಿ ಪ್ರಕಾಶ್ ಕಾರ್ಯಪ್ಪ ಹಾಗೂ ಅವರ ಪತ್ನಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ಬೇರ್ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಮೊಣ್ಣಂಡ ನೇಹ ಮೋಟಯ್ಯ, ಉಳುವೊಂಗಡ ಅಮಿತ್ ಬೋಪಣ್ಣ, ಮಂಡಿರ ಪದ್ಮ ಬೋಪಯ್ಯ, ಗುಮ್ಮಟ್ಟಿರ ಕಿಶು ಉತ್ತಪ್ಪ, ವಾಂಚಿರ ವಿಠಲ್ ನಾಣಯ್ಯ, ಪುಲಿಯಂಡ ಯಾಮಿನಿ, ಕೋಲೆಯಂಡ ನಿಶಾ ಮೋಹನ್, ಬಾಲ ನಟಿಯಾಗಿ ಕೊಟ್ಟುಕತ್ತಿರ ತೇಜಲ್ ಕಾರ್ಯಪ್ಪ, ತನಂ ಕಾರ್ಯಪ್ಪ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ವಿಠಲ್ ರಂಗದೋಳ್ ಸಂಗೀತ ನೀಡಿದ್ದಾರೆ, ನಿರ್ಮಾಣ ವ್ಯವಸ್ಥಾಪಕರಾಗಿ ಈರಮಂಡ ವಿಜಯ್ ಉತ್ತಯ್ಯ, ಸಹ ನಿರ್ದೇಶಕರಾಗಿ ಈರಮಂಡ ಹರಿಣಿ ವಿಜಯ್, ನಾಗರಾಜ್ ನೀಲ್, ಛಾಯಾಗ್ರಾಹಕರಾಗಿ ಪ್ರದೀಪ್ ಆರ್ಯನ್, ಸಂಕಲನಕಾರರಾಗಿ ಮುತ್ತುರಾಜು ಪಿ. ಹಾಗೂ ದ್ರೋಣ್ ನಿರಂಜನ್ ಕಾರ್ಯನಿರ್ವಹಿಸಿದ್ದಾರೆ.
ಅ.10 ಮತ್ತು 11ರಂದು ಬೆಳಿಗ್ಗೆ 11.30ರಿಂದ ಸಂಜೆ 7ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಸಣ್ಣ ಭಾಷೆಗಳನ್ನು ಪ್ರತಿನಿಧಿಸುವ ಚಿತ್ರಗಳ ಪ್ರದರ್ಶನ ಮತ್ತು ಸಂವಾದಗಳು ನಡೆಯಲಿವೆ. ಅನೇಕ ಭಾಷೆಗಳ ಚಿತ್ರಗಳ ಜೊತೆಯಲ್ಲಿ ಕೊಡವ ಭಾಷೆ ಮತ್ತು ಸಾಹಿತ್ಯದ ನೆಲೆಯಿಂದ ಮೂಡಿಬಂದಿರುವ ಬೇರ್ ಚಿತ್ರವು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಕೊಡಗಿನ ಸಿನಿಮಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.