ಅ.3ರಂದು ಕೊಡಗು ಶಕ್ತಿ ನಡಪು : ಕೊಡಗಿನ ಭೂಮಿ, ಸಂಸ್ಕೃತಿ ಹಾಗೂ ಸಮುದಾಯದ ಸಂರಕ್ಷಣೆಗಾಗಿ ಪವಿತ್ರ ವಾರ್ಷಿಕ ಯಾತ್ರೆ
admincoorgdaily

ಮಡಿಕೇರಿ ಸೆ.25 : ಕಾವೇರಿ ನಾಡು ಕೊಡಗಿನ ಭೂಮಿ, ಸಂಸ್ಕೃತಿ ಹಾಗೂ ಸಮುದಾಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಸಂಕಲ್ಪದೊಂದಿಗೆ ಕೊಡಗು ಶಕ್ತಿ ನಡಪು ಅ.3ರಂದು ನಡೆಯಲಿದೆ ಎಂದು ಪವಿತ್ರ ವಾರ್ಷಿಕ ಯಾತ್ರೆಯ ಆಯೋಜಕ ಬಲ್ಯಾಟಂಡ ಪೂಣಚ್ಚ ಮಾಚಯ್ಯ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾವೇರಿ ಮಾತೆಯ ಉಗಮಸ್ಥಳವಾದ ತಲಕಾವೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಆರಂಭವಾಗುವ ಈ ಪವಿತ್ರ ಯಾತ್ರೆಯು ಪೇರೂರು ಇಗ್ಗುತ್ತಪ್ಪ ಹಾಗೂ ನೆಲಜಿ ಇಗ್ಗುತ್ತಪ್ಪ ದೇವಾಲಯದ ಮೂಲಕ ಸಾಗಿಬಂದು, ಮಳೆ, ಬೆಳೆ ಹಾಗೂ ಸುಗ್ಗಿಯೊಂದಿಗೆ ಆಳವಾದ ಸಂಬಂಧ ಹೊಂದಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಜೆ 6.30 ಗಂಟೆಗೆ ಅಂತ್ಯಗೊಳ್ಳಲಿದೆ. ಅಖಿಲ ಕೊಡವ ಸಮಾಜ, ಇಗ್ಗುತ್ತಪ್ಪ ದೇವಾಲಯ ಸಮಿತಿಗಳು, ಮಲ್ಮ ಬೆಟ್ಟ ಹೋರಾಟ ಸಮಿತಿಗಳು ಹಾಗೂ ಈ ಭಾಗದ ಗ್ರಾಮಸ್ಥರ ಸಹಕಾರದೊಂದಿಗೆ ಕೊಡಗು ಶಕ್ತಿ ನಡಪು ನಡೆಯಲಿದೆ ಎಂದರು.
ನಡಪು ಮಾರ್ಗದ ಆಯ್ದ ಭಾಗಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಾಗುವುದು. ಕೆಲವು ಸಂಪರ್ಕ ಮಾರ್ಗಗಳಲ್ಲಿ ವಾಹನದ ನೆರವು ಪಡೆಯಲಾಗುತ್ತಿದ್ದು, ನಿಗದಿತ ಸಮಯದೊಳಗೆ ಸಂಪೂರ್ಣ ಮಾರ್ಗವನ್ನು ಪೂರ್ಣಗೊಳಿಸುವ ವ್ಯವಸ್ಥೆ ಮಾಡಲಾಗಿದೆ.
ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಸ್ಥಳಗಳನ್ನು ಸಂಪರ್ಕಿಸುವುದರ ಜೊತೆಗೆ, ಸಂರಕ್ಷಣೆ, ಸಂಸ್ಕೃತಿ ಮತ್ತು ಸಮುದಾಯ ಎಂಬ ಮೂರು ಪ್ರಮುಖ ಸ್ತಂಭಗಳ ಮೇಲೆ ಕೊಡಗು ಶಕ್ತಿ ನಡಪು ರೂಪುಗೊಂಡಿದೆ ಎಂದು ತಿಳಿಸಿದರು.
ಕೊಡಗಿನ ಪವಿತ್ರ ಯಾತ್ರಾ ಸ್ಥಳಗಳು ಪ್ರವಾಸಿತಾಣಗಳಾಗಿ ಮಾರ್ಪಟ್ಟಿವೆ. ಇದನ್ನು ತಪ್ಪಿಸಿ ಪಾವಿತ್ರತ್ಯೆಯನ್ನಯ ಕಾಪಾಡಬೇಕು, ಪಶ್ಚಿಮಘಟ್ಟ, ಕೊಡಗಿನ ಪಾರಂಪರಿಕ ಭೂಮಿಯನ್ನು ಉಳಿಸಬೇಕು, ಶ್ರೇಷ್ಠವಾದ ಕೊಡವ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಜಾಗೃತಿ ಮೂಡಿಸಿ ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸಬೇಕು ಎನ್ನುವ ಉದ್ದೇಶ ನಮ್ಮದು. ತಲಕಾವೇರಿಯಿಂದ ಆರಂಭಗೊಂಡು ಪಾಡಿ ಇಗ್ಗುತ್ತಪ್ಪ ದೇವಾಲಯದವರೆಗಿನ ಪ್ರದೇಶಗಳು ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ಪ್ರದೇಶವಾಗಿದ್ದು, ಪ್ರತಿವರ್ಷ ಶ್ರದ್ಧಾಭಕ್ತಿಯಿಂದ ಯಾತ್ರೆ ಮಾಡುವುದರಿಂದ ಪ್ರಸ್ತುತ ಏರುಪೇರಾಗಿರುವ ಹವಾಗುಣ ಯಥಾಸ್ಥಿತಿಗೆ ಮರಳಲಿದೆ ಎಂದು ಅಭಿಪ್ರಾಯಪಟ್ಟರು.
ಸಂರಕ್ಷಣೆಗೆ ಸಂಕಲ್ಪ;
ಪಶ್ಚಿಮಘಟ್ಟಗಳ ಪ್ರಮುಖ ಭಾಗವಾಗಿರುವ ಕೊಡಗು, ಜೀವವೈವಿಧ್ಯ ಹಾಗೂ ದಕ್ಷಿಣ ಭಾರತದ ಜಲಸಂಪನ್ಮೂಲಗಳ ದೃಷ್ಟಿಯಿಂದ ಮಹತ್ವದ ಪ್ರದೇಶವಾಗಿದೆ. ಕಾವೇರಿ ನದಿ ಕೊಡಗಿನಲ್ಲೇ ಹುಟ್ಟಿ ತನ್ನ ಜಲಾನಯನ ಪ್ರದೇಶದ ಮೂಲಕ ಕೋಟ್ಯಾಂತರ ಜನರ ಜೀವನಕ್ಕೆ ಆಧಾರವಾಗಿದೆ.
ಮಳೆಯ ಏರುಪೇರು ಸೇರಿದಂತೆ ಪರಿಸರದಲ್ಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಕೊಡಗಿನ ಕಾಡುಗಳು, ಸಸ್ಯ-ಪ್ರಾಣಿ ಸಂಕುಲ, ಮಣ್ಣು, ಜೌಗು ಪ್ರದೇಶಗಳು, ಹೊಳೆಗಳು ಮತ್ತು ಜಲಾನಯನ ಪ್ರದೇಶಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಉಳಿದಿರುವುದನ್ನು ಕಾಪಾಡುವುದರ ಜೊತೆಗೆ, ಹಿಂದೆ ಕಳೆದುಹೋದ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವಗೊಳಿಸುವ ಸಂಕಲ್ಪವನ್ನು ನಡಪು ಹೊಂದಿದೆ.
ಸಂಸ್ಕೃತಿಯ ಸಂರಕ್ಷಣೆ;
ಕೊಡಗಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಜನರು ಹಾಗೂ ಪ್ರಕೃತಿಯ ನಡುವಿನ ಪವಿತ್ರ ಸಂಬಂಧಕ್ಕೆ ವಿಶೇಷ ಸ್ಥಾನವಿದೆ. ಕಾವೇರಿ, ಇಗ್ಗುತ್ತಪ್ಪ, ಪವಿತ್ರ ಜಲಮೂಲಗಳು, ಮಂದ್ ಗಳು, ಪೂರ್ವಜರ ಭೂಮಿ ಹಾಗೂ ಸುಗ್ಗಿ ಸಂಪ್ರದಾಯಗಳ ಮೇಲಿನ ಗೌರವವು ಪ್ರಕೃತಿ ಸಂರಕ್ಷಣೆ ಕೊಡಗಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿಯೇ ಇದ್ದುದನ್ನು ಪ್ರತಿಬಿಂಬಿಸುತ್ತದೆ.
ಇದರೊಂದಿಗೆ ಕೊಡವ ತಕ್ ಭಾಷೆಯ ಸಂರಕ್ಷಣೆಯ ಅಗತ್ಯವನ್ನೂ ನಡಪು ಒತ್ತಿಹೇಳುತ್ತದೆ. ಯುವ ಪೀಳಿಗೆಯಲ್ಲಿ ಕೊಡವ ತಕ್ ಮಾತನಾಡುವುದು, ಕಲಿಸುವುದು, ದಾಖಲಿಸುವುದು ಹಾಗೂ ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.
ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಒಂದು ಸಮುದಾಯದ ಕಥೆಗಳು, ಮೌಖಿಕ ಪರಂಪರೆ, ಸ್ಥಳೀಯ ಪರಿಸರ ಜ್ಞಾನ, ನೆನಪುಗಳು ಮತ್ತು ಗುರುತನ್ನು ಒಳಗೊಂಡಿರುತ್ತದೆ. ಹೀಗಾಗಿ ಕೊಡಗಿನ ಸಂರಕ್ಷಣೆ ಎಂದರೆ ಕಾಡು-ನದಿಗಳ ರಕ್ಷಣೆಯೊಂದಿಗೆ ಅದರ ಜೀವಂತ ಸಾಂಸ್ಕೃತಿಕ ಪರಂಪರೆ, ಸ್ಥಳೀಯ ಜ್ಞಾನ ಮತ್ತು ಭಾಷೆಗಳ ರಕ್ಷಣೆಯೂ ಆಗಿದೆ.
ಎಲ್ಲರಿಗೂ ಮುಕ್ತವಾದ ಸಾಮೂಹಿಕ ಯಾತ್ರೆ;
ಕೊಡಗು ಹಾಗೂ ಕಾವೇರಿ ನದಿಯ ಬಗ್ಗೆ ಕಾಳಜಿ ಹೊಂದಿರುವ ಎಲ್ಲರಿಗೂ ಕೊಡಗು ಶಕ್ತಿ ನಡಪು ಮುಕ್ತವಾಗಿದೆ. ಭಾಗವಹಿಸುವವರು ಗೊತ್ತುಪಡಿಸಿದ ಸ್ಥಳಗಳಲ್ಲಿ ಯಾತ್ರೆಗೆ ಸೇರಿಕೊಳ್ಳಬಹುದಾಗಿದ್ದು, ಮಾರ್ಗದ ಆಯ್ದ ಭಾಗಗಳಲ್ಲಿ ಕಾಲ್ನಡಿಗೆಯಲ್ಲೂ ಪಾಲ್ಗೊಳ್ಳಬಹುದು.
ಪವಿತ್ರ ಸ್ಥಳಗಳು, ಜನರು, ಸಂಸ್ಕೃತಿ ಮತ್ತು ಕೊಡಗಿನ ಭೂದೃಶ್ಯವನ್ನು ಪರಸ್ಪರ ಸಂಪರ್ಕಿಸುವ ಸಾಮೂಹಿಕ ಅನುಭವವನ್ನು ರೂಪಿಸುವುದು ನಡಪುವಿನ ಉದ್ದೇಶವಾಗಿದೆ. ವಾರ್ಷಿಕ ಕಾರ್ಯಕ್ರಮವಾಗಿ ಮುಂದುವರಿಯಲಿರುವ ಕೊಡಗು ಶಕ್ತಿ ನಡಪು, ಪ್ರತಿವರ್ಷದ ಸಂಕಲ್ಪವನ್ನು ಪರಿಸರ ಪುನರುಜ್ಜೀವನ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಅಳೆಯಬಹುದಾದ ಕಾರ್ಯಗಳಾಗಿ ಪರಿವರ್ತಿಸುವ ಗುರಿ ಹೊಂದಿದೆ.
ಕಾವೇರಿ ನದಿಯ ಮೂಲ ಕೊಡಗು ಜಿಲ್ಲೆಯಲ್ಲಿ ಪ್ರಾರಂಭವಾಗಬಹುದು, ಆದರೆ ಕಾವೇರಿ ಚರಿತ್ರೆ ನಮ್ಮೆಲ್ಲರಿಗೂ ಸೇರಿದೆ. ನಾವು ಆನುವಂಶಿಕವಾಗಿ ಪಡೆದದ್ದನ್ನು ಸಂರಕ್ಷಿಸುವುದು ಮಾತ್ರವಲ್ಲ, ನಮ್ಮ ನಂತರ ಬರುವವರಿಗೆ ಅದನ್ನು ಪುನರುತ್ಪಾದಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದರಲ್ಲಿ ನಮ್ಮ ಕಾಡುಗಳು, ನಮ್ಮ ನೀರು, ನಮ್ಮ ಸಂಪ್ರದಾಯಗಳು ಮತ್ತು ನಮ್ಮ ಭಾಷೆ ಸೇರಿವೆ ಎಂದು ಬಲ್ಯಾಟಂಡ ಪೂಣಚ್ಚ ಮಾಚಯ್ಯ ವಿವರಿಸಿದರು.
ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ನ ಅಧ್ಯಕ್ಷ ಡಾ.ಸಿ.ಜಿ.ಕುಶಾಲಪ್ಪ ಅವರು ಮಾತನಾಡಿ ಪ್ರಕೃತಿ, ಸಂಸ್ಕೃತಿ ಮತ್ತು ಭವಿಷ್ಯ ಎಂಬ ಸಂದೇಶದೊAದಿಗೆ ಯಾತ್ರೆ ನಡೆಯಲಿದೆ. ಪ್ರಕೃತಿ ಉಳಿದರೆ ಕೊಡಗಿನ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಕೊಡಗು ಉಳಿಯುತ್ತದೆ. ಕೊಡಗಿನಲ್ಲಿ 1214 ದೇವರಕಾಡುಗಳಿದ್ದು, ವೈವಿಧ್ಯಮಯವಾದ ಈ ಪರಿಸರವನ್ನು ಉಳಿಸಬೇಕಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ನಡೆಯುತ್ತಿದೆ, ಕೇರಳ ಮಾಡಲ್ ಎಂದು ಪ್ರಸ್ತಾಪಿಸಲಾಗುತ್ತಿದೆ. ಆದರೆ ನಮಗೆ ಯಾವುದೇ ಮಾಡಲ್ ನ ಅಗತ್ಯವಿಲ್ಲ, ಕೊಡಗು ಮಾಡಲ್ ಸಾಕು, ಇಲ್ಲಿನ ಪ್ರಕೃತಿಯನ್ನು ಉಳಿಸಬೇಕು, ಕೊಡಗಿನ ಭೂಮಿ ಮಾರಾಟವಾಗುವುದನ್ನು ತಡೆಯಬೇಕು, ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು. ಈ ಉದ್ದೇಶದಿಂದ ಅ.3 ರಂದು ಕೊಡಗು ಶಕ್ತಿ ನಡಪು ನಡೆಯುತ್ತಿದ್ದು, ಒಂದೇ ದಿನ 40 ಕಿ.ಮೀ ಕ್ರಮಿಸುವುದಾಗಿ ಹೇಳಿದರು.
ಪೇರೂರು ಇಗ್ಗುತ್ತಪ್ಪ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಚ್ಚುರ ಎಂ.ರವೀಂದ್ರ ಅವರು ಮಾತನಾಡಿ ಕೊಡಗಿನ ಪರಿಸರ, ಜಲ ಮತ್ತು ಧಾರ್ಮಿಕ ನೆಲೆಗಳ ಸಂರಕ್ಷಣೆಯಾಗಬೇಕಾಗಿದೆ. ಪವಿತ್ರ ತಲಕಾವೇರಿಯಿಂದ ಇಗ್ಗುತ್ತಪ್ಪನ ನೆಲೆ ಮಲ್ಮ ಬೆಟ್ಟದವರೆಗಿನ ಪ್ರದೇಶ ಭಕ್ತರ ಯಾತ್ರಾ ಸ್ಥಳವಾಗಿದೆ. ಇವುಗಳು ಪ್ರವಾಸಿತಾಣಗಳಾಗಿ ಮಾರ್ಪಡಬಾರದು, ಇಲ್ಲಿನ ಪರಿಸರವನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಬೇಕಾಗಿದೆ. ರೆಸಾರ್ಟ್ ಮತ್ತು ಹೋಂಸ್ಟೇಗಳು ಕೊಡಗಿನ ಮಕ್ಕಳ ದಿಕ್ಕು ತಪ್ಪಿಸುತ್ತಿವೆ. ಧಾರ್ಮಿಕ ನೆಲೆಗಳು ಮತ್ತು ಪರಿಸರವನ್ನು ಮಲೀನಗೊಳಿಸಿದರೆ ಹವಾಗುಣದಲ್ಲಿ ಏರುಪೇರಾಗಲಿದೆ ಎಂದರು.
ಜನರ ಹೋರಾಟದ ಫಲವಾಗಿ ಮಲ್ಮ ಬೆಟ್ಟವನ್ನು ಉಳಿಸಿಕೊಂಡಿದ್ದು, ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಸರಕಾರಿ ಬೆಲೆಯಲ್ಲಿ ಈ ಪ್ರದೇಶವನ್ನು ಖರೀದಿಸುವ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಪ್ರತಿಯೊಂದು ಕೊಡವ ಕುಟುಂಬಗಳು ಕೈಜೋಡಿಲಿವೆ ಎಂದು ತಿಳಿಸಿದರು.
ಮಲ್ಮ ಹಿತರಕ್ಷಣಾ ಸಮಿತಿಯ ಪ್ರಮುಖ ಮಣವಟ್ಟಿರ ಹರೀಶ್ ಕುಶಾಲಪ್ಪ ಅವರು ಮಾತನಾಡಿ ಕೊಡಗು ಬಂಡವಾಳಶಾಹಿಗಳ ದಬ್ಬಾಳಿಕೆಯಲ್ಲಿ ಸಿಲುಕಿಕೊಂಡಿದೆ. ಕೋಟಿಗಟ್ಟಲೆ ಹಣ ಸುರಿದು ಭೂಮಿಯನ್ನು ಖರೀದಿಸುತ್ತಿದ್ದಾರೆ, ಕೊಡಗು ಕೊಡಗಾಗಿ ಉಳಿಯಬೇಕಾಗಿದೆ. ಕೃಷಿ ಭೂಮಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗದಂತೆ ತಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಮುಖರಾದ ಮೂಕಳೇರ ಕಾವ್ಯ ಅವರು ಮಾತನಾಡಿ ಕೊಡಗು ಉಳಿಯಬೇಕು, ಕೊಡವಾಮೆ ಬೆಳೆಯಬೇಕು. ಕೊಡಗು ಶಕ್ತಿ ನಡಪು ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೆಲಜಿ ಇಗ್ಗುತ್ತಪ್ಪ ದೇವಾಲಯದ ಪ್ರಮುಖ ಮಾಳೆಯಂಡ ವಿಜು ಅಚ್ಚಪ್ಪ ಉಪಸ್ಥಿತರಿದ್ದರು.