Kodagu

ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ

admincoorgdaily

ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕೊಡಗು ವಿದ್ಯಾಲಯದ ಬಾಲಕಿಯರ ತಂಡ
1002420191.jpg


ಮಡಿಕೇರಿ: ಸೆ 12-  ಮಹಾರಾಷ್ಟ್ರದ ಕೊಲ್ಹಾಪುರದ ಸಂಜೀವನ್ ಶಾಲೆಯಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕಿಯರ ಹಾಗೂ ಬಾಲಕರ ಹಾಕಿ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿವೆ.
 ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು, ಇದೇ ತಿಂಗಳು ಪಂಜಾಬ್‌ನ ಅಮೃತಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಕೊಡಗು ವಿದ್ಯಾಲಯದ ಕ್ರೀಡಾ ಕ್ಷೇತ್ರದ ಹೆಮ್ಮೆಯ ಸಾಧನೆಯಾಗಿದೆ.

ಬಾಲಕಿಯರ ತಂಡವು ಲೀಗ್ ಹಂತದಲ್ಲಿ ಡಿಫೆನ್ಸ್ ಕೆರಿಯರ್ ಅಕಾಡೆಮಿ ವಿರುದ್ಧ 18–0 ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್, ಮೈಸೂರು ವಿರುದ್ಧ 6–0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.
 ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಜನನ ಸ್ವೀಕರ್ ತಂಡವನ್ನು 6–0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು. 
ಫೈನಲ್ ಪಂದ್ಯದಲ್ಲಿ ಆತಿಥೇಯ ಸಂಜೀವನ್ ಶಾಲೆ, ಕೊಲ್ಹಾಪುರ ತಂಡವನ್ನು 4–3  ಗೋಲುಗಳ ಅಂತರದಲ್ಲಿ ರೋಚಕವಾಗಿ ಸೋಲಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.

 ಬಾಲಕಿಯರ ತಂಡದ ನಾಯಕಿಯಾಗಿ ಲಕ್ಷ್ಯ ಪೊನ್ನಕ್ಕ ತಂಡವನ್ನು ಮುನ್ನಡೆಸಿದರು.
ಬಾಲಕರ ತಂಡವೂ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸಿತು. 

ಲೀಗ್ ಹಂತದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿ ವಿರುದ್ಧ 6–0 ಹಾಗೂ ಎಸ್.ಬಿ. ಪಾಟೀಲ್, ರಾವೆಟ್, ಪುಣೆ ವಿರುದ್ಧ 2–0 ಅಂತರದಲ್ಲಿ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಸಂಜಯ್ ಘೋಡಾವತ್ ತಂಡವನ್ನು 3–0 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತು.

 ಫೈನಲ್ ಪಂದ್ಯದಲ್ಲಿ ಸಂಜೀವನ್ ಶಾಲೆ, ಕೊಲ್ಹಾಪುರ ತಂಡದ ವಿರುದ್ಧ 2–0 ಅಂತರದಲ್ಲಿ ಸೋಲು ಅನುಭವಿಸಿ ದ್ವಿತೀಯ ಸ್ಥಾನ ಗಳಿಸಿತು.
 ಬಾಲಕರ ತಂಡದ ನಾಯಕನಾಗಿ ತನಿಷ್ ಎನ್.ಜಿ. ತಂಡವನ್ನು ಮುನ್ನಡೆಸಿದರು.
ಈ ಎರಡೂ ತಂಡಗಳ ಯಶಸ್ಸಿನಲ್ಲಿ ಹಾಕಿ ಕ್ರೀಡಾ ಕೋಚ್‌ಗಳಾದ ದೀನಾ ಎಚ್.ಡಿ. ಹಾಗೂ ಪಾರ್ವತಿ ಕೆ.ಎ. ಅವರ  ತರಬೇತಿ,  ಪ್ರಮುಖ ಪಾತ್ರ ವಹಿಸಿದೆ.

 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ, ನಿರಂತರ ಅಭ್ಯಾಸದ ಮೂಲಕ ಅವರ ಆಟದ ಕೌಶಲ್ಯವನ್ನು ಬೆಳೆಸಿದ ಕೋಚ್‌ಗಳ ಮಾರ್ಗದರ್ಶನದಿಂದ ತಂಡಗಳು ಆತ್ಮವಿಶ್ವಾಸದಿಂದ ಪಂದ್ಯಗಳನ್ನು ಎದುರಿಸಿ ಈ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಯಿತು.

ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ ಈ ಸಾಧನೆಯು ಅವರ ಪ್ರತಿಭೆ, ಕಠಿಣ ಪರಿಶ್ರಮ, ತಂಡಸ್ಫೂರ್ತಿ ಹಾಗೂ ಕೋಚ್‌ಗಳ ಸಮರ್ಪಣೆಗೆ ಸಾಕ್ಷಿಯಾಗಿದೆ.

 ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುವ ಬಾಲಕಿಯರ ತಂಡಕ್ಕೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ  ಕೆ.ಎಸ್. ಸುಮಿತ್ರಾ, ಆಡಳಿತ ಮುಖ್ಯಸ್ಥರಾದ ರವಿ ಪಿ.,  ಅಭಿನಂದನೆ ಸಲ್ಲಿಸಿ, ಅಮೃತಸರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.