ವಿರಾಜಪೇಟೆಯಲ್ಲಿ ಕೊಡವ ಅಂತರ್ ಕೇರಿ ಬ್ಯಾಡ್ಮಿಂಟನ್ ಟೂರ್ನಮೆಂಟ್: ಶಾಸಕ ಎ.ಎಸ್. ಪೊನ್ನಣ್ಣ ಭಾಗಿ
admincoorgdaily

ವಿರಾಜಪೇಟೆ:ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ಆಯೋಜನೆಗೊಂಡಿರುವ “ಕೊಡವ ಅಂತರ್ ಕೇರಿ ಬ್ಯಾಡ್ಮಿಂಟನ್ ಟೂರ್ನಮೆಂಟ್” ನ ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಭಾಗವಹಿಸಿ ಶುಭ ಕೋರಿದರು.
ಈ ವೇಳೆ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅತೀ ಮುಖ್ಯ. ಅದರಲ್ಲೂ ಶತಮಾನಗಳಿಂದ ಪ್ರಸಿದ್ಧವಾಗಿರುವ ಬ್ಯಾಡ್ಮಿಂಟನ್ ಗ್ರಾಮೀಣ ಭಾಗದ ಜನರನ್ನು ಆಕರ್ಷಿಸುತ್ತಿದೆ. ಟೂರ್ನಿಯಲ್ಲಿ ಭಾಗವಹಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡಿ ಉಳಿದ ಕ್ರೀಡಾಪಟುಗಳಿಗೆ ಆದರ್ಶವಾಗಲಿ ಎಂದು ಹಾರೈಸಿದರು.
ಕೊಡವ ಅಂತರ್ ಕೇರಿ ವ್ಯಾಪ್ತಿಯಲ್ಲಿ ಪಂದ್ಯಾವಳಿ ಆಯೋಜನೆಗೊಂಡಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಉತ್ತಮ ಹೆಸರು ಗಳಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ರವಿ ಉತ್ತಪ್ಪ, ಉಪಾಧ್ಯಕ್ಷ ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮಾಜಿ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಟೂರ್ನಮೆಂಟ್ ಅಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.