Kodagu

ಕೊಡವಲ್ಯಾಂಡ್ ಸ್ವಾಯತ್ತತೆಯೊಂದೇ ಪರಿಹಾರ: ಎನ್.ಯು.ನಾಚಪ್ಪ

admincoorgdaily

ಕೊಡವಲ್ಯಾಂಡ್ ಸ್ವಾಯತ್ತತೆಯೊಂದೇ ಪರಿಹಾರ: ಎನ್.ಯು.ನಾಚಪ್ಪ
ಮಾದಾಪುರ:: ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್, ವಿಶಾಖಪಟ್ಟಣಂ ಹಾಗೂ ಗೋದಾವರಿ ಗುಡ್ಡಗಾಡು ಪ್ರಾಂತ್ಯಗಳ ಮಾದರಿಯಲ್ಲಿ ಸಂವಿಧಾನದ 5ನೇ ಪರಿಚ್ಛೇದದ ಅಡಿಯಲ್ಲಿ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡುವುದೊಂದೇ ಆದಿಮಸಂಜಾತ ಕೊಡವರು ಎದುರಿಸುತ್ತಿರುವ ಭೌಗೋಳಿಕ-ರಾಜಕೀಯ ದುರಂತಕ್ಕೆ ಪರಿಹಾರ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಮಾದಾಪುರದಲ್ಲಿ ಶನಿವಾರ ಆಯೋಜಿಸಿದ್ದ ಸಿಎನ್‌ಸಿಯ 2ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಮಸಂಜಾತ ಕೊಡವರನ್ನು ಸಂವಿಧಾನದ ಅಡಿಯಲ್ಲಿ ವಿಶಿಷ್ಟ ಪ್ರಕೃತಿ ಆರಾಧಕ ಧಾರ್ಮಿಕ ಸಮುದಾಯವೆಂದು ಗುರುತಿಸಿ, ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಸ್ವಯಂ-ಆಡಳಿತದ ಭದ್ರತೆ ನೀಡಿದರೆ ಮಾತ್ರ ಕೊಡವರ ಜಮೀನು, ಜಲ, ಸಂಸ್ಕೃತಿ, ಪರಂಪರೆ, ಪರಿಸರ ಮತ್ತು ಜೀವವೈವಿಧ್ಯವನ್ನು ರಕ್ಷಿಸಲು ಸಾಧ್ಯ ಎಂದರು.

ಕೊಡವರ ಪವಿತ್ರ ಕ್ಷೇತ್ರಗಳಾದ ಮಂದ್, ವಿಶಿಷ್ಟ ಕೊಡವ ವಂಶಾವಳಿ ಹಾಗೂ ಸಾಂಪ್ರದಾಯಿಕ ತಾಯ್ನಾಡಿನ ಇತಿಹಾಸವನ್ನು ಮುನ್ನೆಲೆಗೆ ತರಬೇಕು. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಸಿಎನ್‌ಸಿ ವತಿಯಿಂದ ಕೊಡವ ಪ್ರಾಂತದಾದ್ಯಂತ ಶಾಂತಿಯುತ ಮಾನವ ಸರಪಳಿ ಮೂಲಕ ಕೊಡವ ಜನಾಂಗೀಯ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಂವಿಧಾನದ 371ನೇ ವಿಧಿ ಹಾಗೂ 5ನೇ ಮತ್ತು 6ನೇ ಪರಿಚ್ಛೇದಗಳ ಅಡಿಯಲ್ಲಿ ಸ್ವಯಂ ಆಡಳಿತ, ಮೂಲನಿವಾಸಿ ಸಮುದಾಯವಾಗಿ ಸಾಂವಿಧಾನಿಕ ರಕ್ಷಣೆ ಮತ್ತು ವಿಶೇಷ ಮನ್ನಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಿಎನ್‌ಸಿ ಮುಂದಿಟ್ಟಿದೆ.
ಕೊಡವರ ಸಾಂಪ್ರದಾಯಿಕ ‘ಕೋವಿ-ತೋಕ್’ ಸಂಪ್ರದಾಯದ ಮುಂದುವರಿಕೆಗೆ ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ರಕ್ಷಣೆ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ ಕೊಡವರಿಗೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಪ್ರತ್ಯೇಕ ಶಾಸಕಾಂಗ ಪ್ರಾತಿನಿಧ್ಯ ನೀಡಬೇಕು ಎಂದು ನಾಚಪ್ಪ ಆಗ್ರಹಿಸಿದರು.

ಕಾವೇರಿ ನದಿಯ ನೀರಿನಲ್ಲಿ ಕೊಡವರಿಗೆ ಸಿಂಹಪಾಲು ದೊರೆಯಬೇಕು. ತಲಕಾವೇರಿಯನ್ನು ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಗುರುತಿಸಬೇಕು. ದೇವಟ್‌ಪರಂಬು ನರಮೇಧ ನಡೆದ ಸ್ಥಳ ಸೇರಿದಂತೆ ಕೊಡವರ ಐತಿಹಾಸಿಕ ದುರಂತಗಳ ನೆನಪಿಗಾಗಿ ಅಂತರರಾಷ್ಟ್ರೀಯ ನರಮೇಧ ಸ್ಮಾರಕ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಕೊಡವರ ಪವಿತ್ರ ಮಂದ್‌ಗಳು, ದೇವರಕಾಡುಗಳು ಹಾಗೂ ಇತರ ಪಾರಂಪರಿಕ ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು. ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಐತಿಹಾಸಿಕವಾಗಿ ಕೊಡವರಿಂದ ಕಳೆದುಹೋದ ಪೂರ್ವಜರ ಭೂಮಿಯನ್ನು ಮೂಲನಿವಾಸಿಗಳ ಭೂಹಕ್ಕುಗಳ ಆಧಾರದ ಮೇಲೆ ಮರಳಿ ಕೊಡವರಿಗೇ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಉದ್ದಿನಾಡಂಡ ಮುತ್ತಕ್ಕಿ, ಪಾಸುರ ರಜನಿ ರಾಜ, ಮೇದರ ಪ್ರತೀಕ ಕಂಠಿ, ಕನ್ನಿಕಂಡ ಜಾನಕಿ, ಬಾಳೆಯಡ ಪೊನ್ನಮ್ಮ, ಮಂಡಿರ ಪೂವಮ್ಮ ಸೇರಿದಂತೆ ಹಲವು ಪ್ರಮುಖರು ಹಾಗೂ ಸಿಎನ್‌ಸಿ ಬೆಂಬಲಿಗರು ಪಾಲ್ಗೊಂಡಿದ್ದರು.