ಕೋವಿ ಸಂಸ್ಕೃತಿ ಕೊಡಗಿನ ಹೆಮ್ಮೆ : ಶಾಸಕ ಪೊನ್ನಣ್ಣ
admincoorgdaily

ಅವಂದೂರು: ಶ್ರೀ ಗೋಪಾಲಕೃಷ್ಣ, ಈಶ್ವರ-ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಗೋಪಾಲಕೃಷ್ಣ ಯುವ ಸಂಘ (ರಿ) ಅವಂದೂರು ಸಹಯೋಗದೊಂದಿಗೆ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಸನ್ಮಾನ ಪುರಸ್ಕಾರ ಹಾಗೂ ಸಾಂಪ್ರದಾಯಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಭಾಗವಹಿಸಿ ಶುಭ ಕೋರಿದರು.
ಅವಂದೂರು ಬಳಿಯ ಸರ್ಕಾರಿ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ನಾಡಿನ ಅರೇಭಾಷೆ ಸಮುದಾಯದ ಅನೇಕ ಗುರಿಕಾರರು ತಮ್ಮ ಗುರಿಯನ್ನು ಪರೀಕ್ಷಿಸಲು ಪಣಕ್ಕೆ ಇಟ್ಟಿದ್ದರು. ಈ ಸಂದರ್ಭದಲ್ಲಿ ಶಾಸಕರು ಸಹ ತೆಂಗಿನಕಾಯಿಗೆ ಗುರಿ ಹಿಡಿದು ಯಶಸ್ವಿಯಾಗಿ ಗುರಿಗೆ ತಾಗಿಸುವುದರ ಮೂಲಕ ಸಾರ್ವಜನಿಕರ ಮನಗೆದ್ದರು.
ಬಳಿಕ ಮಾತನಾಡಿದ ಶಾಸಕರು, "ಕೋವಿ ಸಂಸ್ಕೃತಿಯು ಕೊಡಗಿನ ಪ್ರತಿಯೊಬ್ಬರ ಹೆಮ್ಮೆ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಮ್ಮ ಜನರ ಜೀವನದಲ್ಲಿ ಕೋವಿ ಅವಿಭಾಜ್ಯ ಅಂಗ. ಇಂತಹ ಕಾರ್ಯಕ್ರಮಗಳು ಸಮುದಾಯದ ಎಲ್ಲರನ್ನು ಒಟ್ಟಿಗೆ ಸೇರಿಸುವುದರೊಂದಿಗೆ ಒಗ್ಗಟ್ಟು ಮೂಡಿಸುತ್ತದೆ ಹಾಗೂ ಒತ್ತಡದ ಕೃಷಿ ಚಟುವಟಿಕೆಗಳ ಮಧ್ಯೆಯೂ ಜನರಿಗೆ ಮನರಂಜನೆ ನೀಡಲು ಸಹಕಾರಿಯಾಗಿದೆ" ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಅವಂದೂರು ಶ್ರೀ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ದೇವಾಯಿರ ಕೀರ್ತನ್, ಖಜಾಂಚಿ ಚಂದ್ರಪ್ರಕಾಶ್, ಪ್ರಮುಖರಾದ ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಪಟ್ಟಣ ದೀಪಕ್, ಸುರೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.