ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ
admincoorgdaily

ವಿರಾಜಪೇಟೆ: ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ನಂಬರ್ 376ನೇ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಸಂಘದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದಂತಹ ಮಾಜಿ ಅಧ್ಯಕ್ಷರುಗಳಾದ ಬಿ. ವಿ ಭವಾನಿ ಶಂಕರ್ ಬೋರ್ಕರ್, ಕೃಷ್ಣರಾವ್ ಹಾಗೂ ಸುಮಿತ್ರಬಾಯಿ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷರು ಹಾಗೂ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಬಿ .ವಿ ಭವಾನಿ ಶಂಕರ್ ಬೋರ್ಕರ್ ಅವರು ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘವು ಸಕ್ರಿಯ ಸಂಘ ವಾಗಿದ್ದು ಮಲಬಾರ್ ರಸ್ತೆಯ ಬಳಿ ಸಂಘಕ್ಕೆ 1952ರಲ್ಲಿ ನಿವೇಶನ ದೊರಕಿದ್ದು ತದನಂತರ 1955ರಲ್ಲಿ ಅಂದಿನ ಕೊಡಗು ಸಿ ರಾಜ್ಯದ ಮುಖ್ಯಮಂತ್ರಿ ಸಿ. ಎಂ. ಪೂಣಚ್ಚ ಅವರು ಸಂಘದ ಕಟ್ಟಡವನ್ನು ಉದ್ಘಾಟಿಸಿದ್ದರು.
ತದನಂತರ ಈ ಸಂಘದ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಸದಸ್ಯರುಗಳ ಪ್ರೋತ್ಸಾಹ ಹಾಗೂ ಸಹಕಾರದಿಂದ ಸಂಘವು ಮುಂದುವರಿಯುತ್ತಿದ್ದು ಇದೀಗ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗಿದೆ. ಅತಿ ಶೀಘ್ರವಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಸಂಘದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹೆಗ್ಗಳ ಗ್ರಾಮದ ಅರ್ಚಕರಾದ ವೇಣುಗೋಪಾಲ್ ಭಟ್ ರವರು ಪೂಜಾ ವಿಧಿ ವಿಧಾನ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ಅಧ್ಯಕ್ಷರಾದ ಬಿ ಜಿ ನಟರಾಜ್ ಬೋರ್ಕರ್ ಅವರು ಮಾತನಾಡಿ ಹಿಂದಿನ ಕಟ್ಟಡವು ಹಳೆಯದಾದ ರಿಂದ ಇದೀಗ ಸುಸಜ್ಜಿತವಾಗಿ ಕಟ್ಟಡವನ್ನು ನಿರ್ಮಿಸುವ ಸಲುವಾಗಿ ಇಂದು ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ. ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿಸುವ ಗುರಿಯನ್ನು ಹೊಂದಲಾಗಿದೆ . ಸದಸ್ಯರುಗಳು ಹಾಗೂ ಊರಿನವರು, ಸಂಘ ಸಂಸ್ಥೆಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು. ಸರ್ವರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ಕಾರ್ಯದರ್ಶಿ ಉದಯ ಶಂಕರ್, ಉಪಾಧ್ಯಕ್ಷೆ ಸ್ವಾತಿ, ಸರ್ವ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.