Kodagu

ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ ಮಾರ್ಗ

admincoorgdaily

ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ ಮಾರ್ಗ
ಮಡಿಕೇರಿ ಅ.8 : ಮಡಿಕೇರಿ ರಾಜಾಸೀಟು ಬಳಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶ್ರೀ ಚೌಟಿ ಮಾರಿಯಮ್ಮ ದೇವಿಯ ಕರಗ ನಗರ ಪ್ರದಕ್ಷಿಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅ.11ರಿಂದ 21ರವರೆಗೆ ಆಯೋಜಿಸಲಾಗಿದೆ.

ಅ.11ರಂದು ಮಧ್ಯಾಹ್ನ 1.30ಕ್ಕೆ ದೇವಾಲಯದಿಂದ ಕರಗ ಹೊರಟು ಪಂಪಿನಕೆರೆಯನ್ನು ತಲುಪಲಿದೆ. ಸಂಜೆ 6.30ಕ್ಕೆ ಅಲಂಕೃತ ಕರಗದೊಂದಿಗೆ ಬನ್ನಿಮಂಟಪ, ಶ್ರೀ ಕೋದಂಡರಾಮ ದೇವಸ್ಥಾನ, ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಪೇಟೆ ಶ್ರೀ ರಾಮಮಂದಿರ ದೇವಸ್ಥಾನಗಳಿಗೆ ತೆರಳಿ ಬಳಿಕ ದೇವಾಲಯಕ್ಕೆ ಹಿಂದಿರುಗಲಿದೆ.

ಅ.12ರಂದು ಚಿಕ್ಕಪೇಟೆ, ಮೈಸೂರು ರಸ್ತೆ, ಶಾಂತಿನಿಕೇತನ, ಜಯನಗರ ಬಡಾವಣೆ, ಅಶೋಕಪುರ ದೇವಸ್ಥಾನ, ಕೆ.ಇ.ಬಿ. ಕ್ವಾಟರ್ಸ್, ಸುದರ್ಶನ ಬಡಾವಣೆ, ಜಲಾಶ್ರಯ ಬಡಾವಣೆ, ಗುಂಡೂರಾವ್ ಬಡಾವಣೆ, ಬ್ರಾಹ್ಮಣರಬೀದಿ, ಅಶ್ವತಕಟ್ಟೆ, ಪುಟಾಣಿನಗರ ಹಾಗೂ ದೇಚೂರು ಭಾಗಗಳಲ್ಲಿ ಕರಗ ನಗರ ಪ್ರದಕ್ಷಿಣೆ ನಡೆಯಲಿದೆ.

ಅ.13ರಂದು ಮುನೀಶ್ವರ ದೇವಾಲಯ ರಸ್ತೆ, ಶ್ರೀ ಓಂಕಾರೇಶ್ವರ ದೇವಸ್ಥಾನ ರಸ್ತೆ, ಸ್ಕೂಲ್ ರಸ್ತೆ, ರಾಘವೇಂದ್ರ ದೇವಸ್ಥಾನ, ಚೈನ್‌ಗೇಟ್, ದಾಸವಾಳ ರಸ್ತೆ, ಪೌರಕಾರ್ಮಿಕರ ವಸತಿ ಗೃಹ ಹಾಗೂ ರಾಣಿಪೇಟೆ ಭಾಗಗಳಲ್ಲಿ ಸಂಚರಿಸಲಿದೆ.

ಅ.14ರಂದು ರೇಸ್‌ಕೋರ್ಸ್ ರಸ್ತೆ, ಸ್ಟುವರ್ಟ್ ಹಿಲ್, ಹಳೆ ಡೈರಿ ಫಾರ್ಮ್ ರಸ್ತೆ, ಮೈತ್ರಿ ಜಂಕ್ಷನ್, ಕಾನ್ವೆಂಟ್ ಸ್ಕೂಲ್ ರಸ್ತೆ, ಪ್ರಕೃತಿ ಬಡಾವಣೆ ಹಾಗೂ ವಿನಾಯಕ ರೈಸ್ ಮಿಲ್ ರಸ್ತೆ ಮೂಲಕ ಕರಗ ನಗರ ಪ್ರದಕ್ಷಿಣೆ ನಡೆಯಲಿದೆ.

ಅ.16ರಂದು ಹೊಸಬಡಾವಣೆ, ಹಳೆ ಇಂಡೇನ್ ಗ್ಯಾಸ್ ಕಚೇರಿ ರಸ್ತೆ, ಕೊಹಿನೂರು ರಸ್ತೆ, ಖಾದಿ ಭಂಡಾರ, ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನ, ಪೆನ್ನನ್‌ಲೇನ್, ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನ, ನಗರಸಭೆ ಕಚೇರಿ ಹಿಂಭಾಗ, ಗೌಳಿಬೀದಿ ಹಾಗೂ ಕಂಚಿಕಾಮಾಕ್ಷಿ ದೇವಸ್ಥಾನ ಭಾಗಗಳಲ್ಲಿ ಕರಗ ಸಂಚರಿಸಲಿದೆ.

ಅ.20ರಂದು ಆಯುಧ ಪೂಜೆ

ಅ.20ರಂದು ಆಯುಧ ಪೂಜೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ವಾಹನ ಪೂಜೆ ನೆರವೇರಲಿದೆ. ಭಕ್ತಾದಿಗಳು ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಟ್ರಸ್ಟ್ ಮನವಿ ಮಾಡಿದೆ.

ಅ.21ರಂದು ವಿಜಯದಶಮಿ ವಿಶೇಷ ಪೂಜೆ

ವಿಜಯದಶಮಿಯಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮದೊಂದಿಗೆ ದೇವಿಗೆ ಮಹಾಪೂಜೆ, ಅಲಂಕಾರ, ನೈವೇದ್ಯ, ಹಣ್ಣುಕಾಯಿ, ಮಂಗಳಾರತಿ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಅದೇ ದಿನ ರಾತ್ರಿ 11 ಗಂಟೆಗೆ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯಕ್ಕ ಎಂದೇ ಪ್ರಸಿದ್ಧವಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಯ ಕರಗವು ವಿಶೇಷ ಅಲಂಕಾರದೊಂದಿಗೆ ದೇವಾಲಯದಿಂದ ಹೊರಡಲಿದೆ. ಕರಗವು ಇತರೆ ಮೂವರು ಶಕ್ತಿ ದೇವತೆಗಳ ದೇವಾಲಯಗಳಿಗೆ ತೆರಳಿ, ದಶಮಂಟಪಗಳಿಂದ ಪೂಜೆ ಸ್ವೀಕರಿಸಿ, ಬೆಳಗಿನ ಬ್ರಾಹ್ಮ ಮುಹೂರ್ತದಲ್ಲಿ ಬನ್ನಿಮಂಟಪಕ್ಕೆ ತಲುಪಿ ಬನ್ನಿ ಕಡಿದು ಬಳಿಕ ದೇವಾಲಯಕ್ಕೆ ಹಿಂದಿರುಗಲಿದೆ.

ಕರಗೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಟ್ರಸ್ಟ್ ಮನವಿ ಮಾಡಿದೆ.

ರಾತ್ರಿ 11 ಗಂಟೆಯ ನಂತರ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದಸರಾ ಮಂಟಪದ ಮೆರವಣಿಗೆ ನಡೆಯಲಿದೆ.