ಕುಶಾಲನಗರ ಹಾಗೂ ಮಡಿಕೇರಿ ತಾಲೂಕನ್ನೂ ಕೂಡ ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸಿ : ಸಮಾಜ ಸೇವಕ ಪ್ರಸನ್ನ ಎಡಿಕೇರಿ ಒತ್ತಾಯ
admincoorgdaily


ಮಡಿಕೇರಿ : ಕನ್ನಡ ನಾಡಿನ ಜೀವ ನದಿ, ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿಯೇ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದೆ. ಆದ್ದರಿಂದ ಮಡಿಕೇರಿ ಹಾಗೂ ಕುಶಾಲನಗರ ತಾಲೂಕನ್ನು ಕೂಡ ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸುವಂತೆ ಸಮಾಜ ಸೇವಕ, ಬಿಜೆಪಿಯ ಪ್ರಮುಖರಾದ ಪ್ರಸನ್ನ ಎಡಿಕೇರಿ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ತಲಕಾವೇರಿಯಿಂದ ಭಾಗಮಂಡಲದ ಮೂಲಕ ಕಾವೇರಿ ನದಿ ಹರಿದು ಹೋಗುತ್ತದೆ. ಆದರೆ ಇದೀಗ ವಾಡಿಕೆಗಿಂತ ಜಿಲ್ಲೆಯಲ್ಲಿ ಶೇ.35ರಷ್ಟು ಮಳೆ ಕೊರತೆಯ ಪರಿಣಾಮ ಕಾವೇರಿ ನದಿ ಮೂಲದಲ್ಲೇ ನೀರು ಸಂಪೂರ್ಣ ಬತ್ತಿ ಹೋಗುತ್ತಿದೆ. ಭಾಗಮಂಡಲ ಸೇರಿದಂತೆ ಮಡಿಕೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಭತ್ತದ ಕೃಷಿ ಮಾಡಲು ಕೂಡ ರೈತರು ಪರದಾಡುವಂತಾಗಿದೆ. ಕಾಫಿ ಬೆಳೆಗಾರರು ಹಾಗೂ ಕಾಳು ಮೆಣಸು ಬೆಳೆಗಾರರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕಾಳು ಮೆಣಸು ಫಸಲು ಕೂಡ ಈ ಬಾರಿ ತೀವ್ರ ಪ್ರಮಾಣದಲ್ಲಿ ಕುಸಿದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಮೂರು ಬಾರಿ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ. ಈ ಪೈಕಿ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕು, ಎರಡನೇ ಪಟ್ಟಿಯಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕನ್ನು ಮಧ್ಯಮ ಬರ ಪೀಡಿತ ತಾಲೂಕು ಎಂದು ಘೋಷಿಸಿದೆ. ಇದೀಗ ಮೂರನೇ ಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ ಮಡಿಕೇರಿ ಹಾಗೂ ಕುಶಾಲನಗರ ತಾಲೂಕನ್ನು ಪರಿಗಣಿಸಿಲ್ಲದಿರುವುದು ತೀವ್ರ ವಿಷಾದನೀಯ ಎಂದು ಪ್ರಸನ್ನ ವ್ಯಾಖ್ಯಾನಿಸಿದ್ದಾರೆ.
ರಾಜ್ಯದ ಒಟ್ಟು 177 ತಾಲೂಕನ್ನು ಸರ್ಕಾರ ಬರ ಪೀಡಿತ ತಾಲೂಕು ಎಂದು ಘೋಷಿಸಿರುವಾಗ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ತಮಿಳುನಾಡಿಗೂ ನೀರು ನೀಡುವ ಕಾವೇರಿ ತವರು ಕೊಡಗು ಜಿಲ್ಲೆಯ ಐದೂ ತಾಲೂಕನ್ನು ಕೂಡ ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕಿತ್ತು ಎಂದು ಪ್ರಸನ್ನ ಎಡಿಕೇರಿ ಒತ್ತಾಯಿಸಿದ್ದಾರೆ.
ಕುಶಾಲನಗರ ತಾಲೂಕಿನಲ್ಲಿ ಕೂಡ ತೀವ್ರ ಮಳೆ ಕೊರತೆ ಉಂಟಾಗಿದೆ. ಈ ಭಾಗದಲ್ಲಿ ಕೂಡ ಒಣ ಹವೆ ಮುಂದುವರೆದಿದೆ. ಪ್ರಮುಖ ಬೆಳೆಗಳಾದ ಕಾಫಿ, ಕಾಳು ಮೆಣಸು, ಭತ್ತ ಕೃಷಿ, ಶುಂಠಿ ಸೇರಿದಂತೆ ಮುಸುಕಿನ ಜೋಳದ ಕೃಷಿಕರಿಗೂ ಸಮಸ್ಯೆಯಾಗಿದೆ. ಆದರೆ ಸರ್ಕಾರ ಈ ತಾಲೂಕಿನ ಸಮಸ್ಯೆಯನ್ನು ಪರಿಗಣಿಸದಿರುವುದು ಖಂಡನೀಯ ಎಂದಿದ್ದಾರೆ.
ಜಿಲ್ಲೆಯ ಇಬ್ಬರು ಶಾಸಕರು ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಿ ಮತ್ತೆ ಎರಡೂ ತಾಲೂಕನ್ನು ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಲು ಸರ್ಕಾರಕ್ಕೆ ಒತ್ತಡ ಹೇರಬೇಕು. ಆದರೆ ಈ ವರೆಗೂ ಇಬ್ಬರು ಶಾಸಕರು ಪ್ರಸ್ತಾಪ ಮಾಡದಿರುವುದು ತೀವ್ರ ಬೇಸರವುಂಟು ಮಾಡಿದೆ ಎಂದು ಪ್ರಸನ್ನ ಹೇಳಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ;
ಮಳೆ ಇಲ್ಲದ ಪರಣಾಮ ಜಿಲ್ಲೆಯಲ್ಲಿ ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಡಿಕೇರಿ ಹಾಗೂ ಕುಶಾಲನಗರ ತಾಲೂಕನ್ನು ಕೂಡ ಸರ್ಕಾರ ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಷ್ಟು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೊಡಗಿನ ಎಲ್ಲಾ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಬೇಕೆಂದು ಪ್ರಸನ್ನ ಸರ್ಕಾರವನ್ನು ಆಗ್ರಹಿಸಿದ್ದಾರೆ.