Kodagu

ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮಕ್ಕಳಿಂದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ

admincoorgdaily

ಕುಶಾಲನಗರ ಪಿ.ಎಂ.ಶ್ರೀ ಶಾಲಾ ಮಕ್ಕಳಿಂದ  ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ
ಕುಶಾಲನಗರ:  ಕೊಡಗು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕುಶಾಲನಗರ ಪಟ್ಟಣದ ಪಿ.ಎಂ.ಶ್ರೀ.ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಶಾಲಾ ಮಕ್ಕಳು ಪರಿಸರ ರಕ್ಷಣೆಯ ಸಂದೇಶದೊಂದಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವದ ಜಾಗೃತಿ ಮೂಡಿಸಿದ್ದಾರೆ.

  ಶಾಲಾ ಮೈದಾನದಲ್ಲಿ ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳು ಜತೆಗೂಡಿ ಮಣ್ಣಿನಿಂದ ವಿವಿಧ ನಮೂನೆಯ ಗಣೇಶ ಮೂರ್ತಿಗಳನ್ನು ತಯಾರಿಸಿ ಜನರಿಗೆ ಪರಿಸರ ಜಾಗೃತಿ ಸಂದೇಶ ನೀಡಿದರು.
 ಪಿ.ಓ.ಪಿ. ಹಾಗೂ ರಾಸಾಯನಿಕ ಬಣ್ಣ ಬಳಸಿ ತಯಾರಿಸುವ ಗಣೇಶ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಹಾಗೂ ಜಲಮೂಲಗಳಿಗೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.

 ಶಾಲೆಯ ಅಂಗಳದಲ್ಲಿ ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ, ಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಶಾಲೆಯ ಮಕ್ಕಳ ಗೈಡ್ಸ್ ಘಟಕ, ಜಿಲ್ಲಾ ವಿಜ್ಞಾನ ಪರಿಷತ್ತು ಘಟಕದ ಸಂಯುಕ್ತಾಶ್ರಯದಲ್ಲಿ 

 ಪರಿಸರಕ್ಕಾಗಿ ನಾವು : ಮಕ್ಕಳ ಪರಿಸರ ಸಂಭ್ರಮ: 

2026 ರ ಅಂಗವಾಗಿ ನಡೆದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯಲ್ಲಿ ಮಕ್ಕಳು ಸ್ವತಃ   ತಾವು ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಒಪ್ಪೋರಣವಾಗಿಟ್ಟು ಪ್ರದರ್ಶಿಸಿದರು. ಮಕ್ಕಳು ಸಂಭ್ರಮದಿಂದ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರದರ್ಶಿಸಿ ತಮ್ಮ ಶಿಕ್ಷಕರ ಜತೆ ಸಂಭ್ರಮಪಟ್ಟರು.
 ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ
 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್,
ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯು ನಮ್ಮ ಪ್ರಕೃತಿಯನ್ನು ರಕ್ಷಿಸಲು ಮತ್ತು ಹಬ್ಬದ ಸಂತೋಷವನ್ನು ಹೆಚ್ಚಿಸಲು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ, ಗಣೇಶ ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಿ ಪಿ.ಓ.ಪಿ.ಮತ್ತು ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಇವುಗಳನ್ನು ಬಳಸುವುದನ್ನು ಬಿಟ್ಟು  ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಕೆ ಮಾಡುವ ಮೂಲಕ ನಾವು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

 ಸರ್ಕಾರದ ವತಿಯಿಂದ
ಪಿ.ಓ.ಪಿ.ಮತ್ತು ಬಣ್ಣದ ಗಣೇಶ ಮೂರ್ತಿಗಳನ್ನು
 ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ, ನಾವು ಹಬ್ಬದ ಹೆಸರಿನಲ್ಲಿ ಜಲಮೂಲಗಳು ಮತ್ತು ಪರಿಸರ ಕಲುಷಿತಗೊಳ್ಳು
ವುದನ್ನು ತಡೆಯಲು ನಾವು ಕೆಲವು ಸರಳ ವಿಧಾನಗಳ ಮೂಲಕ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

 ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯು ನಮ್ಮ ಹೆಮ್ಮೆ ಮತ್ತು ನಮ್ಮ ಜವಾಬ್ದಾರಿ. ಆದ್ದರಿಂದ,
ನಾವು ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯನ್ನುಂಟು ಮಾಡಬಾರದು. ಪ್ರತಿಯೊಬ್ಬರೂ ಪರಿಸರ ಕಾಳಜಿ ಬೆಳೆಸಿಕೊಂಡು ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಟಿ.ಜಿ.ಪ್ರೇಮಕುಮಾರ್ ಮನವಿ ಮಾಡಿದರು.

ಪರಿಸರ ಪೂರಕ ಗಣೇಶ ಚತುರ್ಥಿ ಆಚರಣೆಯ ಕುರಿತು ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್.ಸಣ್ಣಸ್ವಾಮಿ ಮಾತನಾಡಿ, ಗಣೇಶ ಹಬ್ಬದ ಸಂದರ್ಭದಲ್ಲಿ ನಮ್ಮ ಶಾಲೆಯ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಎಲ್ಲಾ ಧರ್ಮದ  ಮಕ್ಕಳು ಜಾತಿ ಬೇಧ, ಧರ್ಮ ಬಿಟ್ಟು  ಮಕ್ಕಳು ಪರಸ್ಪರ ಜತೆಗೂಡಿ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ಪರಿಸರ ಸಂದೇಶದ ಜತೆಗೆ ಭಾವೈಕ್ಯತೆ ಹಾಗೂ ಸೌಹಾರ್ದತೆ ಮೆರೆದಿರುವುದು ಹೆಮ್ಮೆಯ ಸಂಗತಿ ಎಂದರು.

 ಪರಿಸರ ಸ್ನೇಹಿ ಗಣೇಶ ಆಚರಣೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಕೆ.ಆರ್.ಶಿಲ್ಪ,  ಶಾಲೆಯ ಮಕ್ಕಳಿಂದ ಗಣೇಶ ಹಬ್ಬವನ್ನು
ಪರಿಸರ ಪೂರಕವಾಗಿ ಆಚರಿಸುವ ಉದ್ದೇಶದಿಂದ ಮಕ್ಕಳು ಮಣ್ಣಿನಿಂದ  ವಿವಿಧ ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಿ  ಪರಿಸರ ಜಾಗೃತಿ ಮೂಡಿಸಿದ್ದಾರೆ ಎಂದರು.
 ಶಾಲೆಯ ಗೈಡ್ಸ್ ಕ್ಯಾಪ್ಟನ್ ಪಿ.ಪಿ.ಭವ್ಯ ಮಾತನಾಡಿ,
ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ವಿದ್ಯಾರ್ಥಿಗಳಿಂದ ಪರಿಸರ ಘೋಷಣೆ : ವಿದ್ಯಾರ್ಥಿಗಳು ತಾವು ಮಣ್ಣಿನಿಂದ ತಯಾರಿಸಿದ್ದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರದರ್ಶನಕ್ಕಿಟ್ಟು  ನಂತರ ನಡೆಸಿದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಆಚರಣೆ ಸಂದರ್ಭದಲ್ಲು ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು.

 ತ್ಯಜಿಸಿ ತ್ಯಜಿಸಿ ಪಿ.ಓ.ಪಿ.ಗಣೇಶ     ತ್ಯಜಿಸಿ, ಬಣ್ಣದ ಗಣೇಶ ಮೂರ್ತಿ ಬಳಕೆ ಬೇಡ, ಮಣ್ಣಿನ ಗಣೇಶ ಮೂರ್ತಿ ಬಳಸಿ ಜಲಮಾಲಿನ್ಯ ತಡೆಯಿರಿ, ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸೋಣ ಬನ್ನಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು.

ಬಹುಮಾನ : ಮಣ್ಣಿನಿಂದ ಉತ್ತಮವಾಗಿ
 ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.