Kodagu

ಕುಶಾಲನಗರ: ಹಾರಂಗಿ ಹಿನ್ನೀರಿನಲ್ಲಿ ಜಲಕ್ರೀಡೆಗೆ ನಿರ್ಬಂಧ ವಿಧಿಸಿ - ಕೊಡಗು ಅಹಿಂದ ಬಳಗ ಆಗ್ರಹ

admincoorgdaily

ಕುಶಾಲನಗರ: ಹಾರಂಗಿ ಹಿನ್ನೀರಿನಲ್ಲಿ ಜಲಕ್ರೀಡೆಗೆ ನಿರ್ಬಂಧ ವಿಧಿಸಿ - ಕೊಡಗು ಅಹಿಂದ ಬಳಗ ಆಗ್ರಹ
ಕುಶಾಲನಗರ; ಹಾರಂಗಿ ಹಿನ್ನೀರಿನಲ್ಲಿ ನಡೆದ ಬೋಟ್ ದುರಂತದಲ್ಲಿ ಗುಜರಾತ್ ಮೂಲದ ದಂಪತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಿನ್ನೀರಿನಲ್ಲಿ ಜಲಕ್ರೀಡೆಗೆ ನಿರ್ಬಂಧ ವಿಧಿಸಬೇಕು ಎಂದು ಕೊಡಗು ಅಹಿಂದ ಬಳಗದ ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ಒತ್ತಾಯಿಸಿದ್ದಾರೆ.

ಕುಶಾಲನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದಂಪತಿಗಳ ಸಾವು ಬೋಟಿಂಗ್ ನಡೆಸುವ ಸಂಸ್ಥೆಯ ಬೇಜವಾಬ್ದಾರಿತನ, ನಿರ್ಲಕ್ಷ ಮತ್ತು ಅತಿಯಾದ ವೇಗದಿಂದ ಸಂಭವಿಸಿದೆ. ಈ ಸಾವುಗಳ ಹೊಣೆಯನ್ನು ನೀರಾವರಿ ಇಲಾಖೆ, ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಹೊರಬೇಕು. ಬೋಟಿಂಗ್ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬೋಟ್‌ಗಳ ಹಾವಳಿಯಿಂದ ಹಾರಂಗಿ ನೀರು ಕಲುಷಿತಗೊಳ್ಳುತ್ತಿರುವ ಕಾರಣ ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್ ಕ್ರೀಡೆಯನ್ನು ಯಾವ ಕಾರಣಕ್ಕೂ ಮುಂದುವರಿಸಬಾರದು ಎಂದು ಒತ್ತಾಯಿಸಿದರು. ಸೂಕ್ಷ್ಮ ಪ್ರದೇಶದಲ್ಲಿ ಬೋಟಿಂಗ್ ಜಲಕ್ರೀಡೆಗೆ ವ್ಯಾಪಕ ವಿರೋಧದ ನಡುವೆಯೂ ಅನುಮತಿ ನೀಡಿರುವ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದರು.

ಬಳಗದ ಉಪಾಧ್ಯಕ್ಷ ಅರುಣ್ ರಾವ್ ಮಾತನಾಡಿ, ಸೋಮವಾರಪೇಟೆ ಮತ್ತು ಕುಶಾಲನಗರ ಭಾಗಕ್ಕೆ ಹಾರಂಗಿ ಅಣೆಕಟ್ಟೆ ಪ್ರಮುಖ ಜಲಮೂಲವಾಗಿದೆ. ಈಗಾಗಲೇ ಅಮೃತ್-2 ಯೋಜನೆಯಡಿ ಕುಶಾಲನಗರಕ್ಕೆ ಹಾರಂಗಿ ನೀರನ್ನು ಹರಿಸುವ ಯೋಜನೆ ಪ್ರಗತಿಯಲ್ಲಿದೆ. ಸಣ್ಣ ಅಣೆಕಟ್ಟೆಯಾಗಿರುವ ಹಾರಂಗಿಯಲ್ಲಿ ಬೋಟಿಂಗ್ ಕಾರಣ ಡೀಸೆಲ್ ನೀರಿಗೆ ಮಿಶ್ರಣಗೊಂಡು ನೀರನ್ನು ಮಲಿನಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೋಟಿಂಗ್ ಚಟುವಟಿಕೆ ನಿರ್ಬಂಧಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ಟಿ.ಇ. ಸುರೇಶ್, ಸಂಘಟನಾ ಕಾರ್ಯದರ್ಶಿ ರವಿ ಅಜ್ಜಳ್ಳಿ, ಜಿಲ್ಲಾ ಸಮಿತಿ ಸದಸ್ಯ ಸರ್ಕಲ್ ಮಂಜುನಾಥ್, ಸದಸ್ಯರಾದ ಶಾಹಿದ್, ಅಜೀಜ್ ಇದ್ದರು.