ಕುಟ್ಟ ಹೋಂಸ್ಟೇ ಕೇಸ್; ಮಾಲೀಕನಿಗೆ 5 ಲಕ್ಷ ಪರಿಹಾರ ಕೊಡಲೇಬೇಕು, ಸರ್ಕಾರಕ್ಕೆ ಸುಪ್ರೀಂ ಶಾಕ್!
admincoorgdaily

ನವದೆಹಲಿ; ಕುಟ್ಟ ಹೋಂಸ್ಟೇ ಮಾಲೀಕ ಪೊನ್ನಪ್ಪ ಅವರನ್ನು ಕೊಡಗು ಪೊಲೀಸರು ಅಕ್ರಮವಾಗಿ ಬಂಧಿಸಿದ್ದರು ಎಂದು ಹೈಕೋರ್ಟ್‌ನಲ್ಲಿ ಹೋಂಸ್ಟೇ ಮಾಲೀಕರು ಸಲ್ಲಿಸಿದ್ದ ಅರ್ಜಿ ಮೇರೆಗೆ, ಅವರಿಗೆ ಸರ್ಕಾರ ರೂ. 5 ಲಕ್ಷ ಪರಿಹಾರ ನೀಡಬೇಕು ಎಂದು ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಇದರ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ಸುಪ್ರೀಂ ಕೋರ್ಟ್ ವಜಾಗೊಳಿಸಿ, ಹೈಕೋರ್ಟ್ ಆದೇಶವನ್ನು ಪುರಸ್ಕರಿಸಿದೆ.
ಅಮೆರಿಕದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಕಳೆದ ಏಪ್ರಿಲ್ 12ರಂದು ಕೊಡಗಿನ ಕುಟ್ಟ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಹೋಂಸ್ಟೇ ನೌಕರನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇರೆಗೆ ಪ್ರಕರಣ ದಾಖಲಾಗಿ ಆತನನ್ನು ಬಂಧಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕರನ್ನು ಕಾನೂನು ಬಾಹಿರವಾಗಿ ಬಂಧಿಸಿದ ಕಾರಣ ಅವರಿಗೆ ಸರ್ಕಾರ ರೂ. 5 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಜುಲೈ 5ರಂದು ಆದೇಶ ನೀಡಿತ್ತು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿತ್ತು.
ಬಳಿಕ ಈ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕರು ಮತ್ತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು.
ರಾಜ್ಯ ಸರ್ಕಾರ ತನಗೆ ರೂ. 5 ಲಕ್ಷ ಪರಿಹಾರ ಪಾವತಿಸಿಲ್ಲ ಎಂದು ಆರೋಪಿಸಿ ಹೋಂಸ್ಟೇ ಮಾಲೀಕ ಪೊನ್ನಪ್ಪ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದರ ವಿರುದ್ಧ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂನಲ್ಲಿ ಸರ್ಕಾರದ ಅರ್ಜಿ ವಜಾಗೊಂಡಿದೆ. ಆದರೆ, ತನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕೆಂಬ ಹೋಂಸ್ಟೇ ಮಾಲೀಕರ ಮನವಿಯನ್ನು ನ್ಯಾಯಾಲಯಗಳು ಪುರಸ್ಕರಿಸಿಲ್ಲ.