Kodagu

ಕುಯ್ಯಂಬುಡಿ ಮೇಲ್ಸೇತುವೆ ಅಪಾಯದ ಅಂಚಿನಲ್ಲಿ; ಅನಾಹುತಕ್ಕೂ ಮುನ್ನ ತುರ್ತು ದುರಸ್ತಿಗೆ SDPI ಆಗ್ರಹ

admincoorgdaily

ಕುಯ್ಯಂಬುಡಿ ಮೇಲ್ಸೇತುವೆ ಅಪಾಯದ ಅಂಚಿನಲ್ಲಿ; ಅನಾಹುತಕ್ಕೂ ಮುನ್ನ ತುರ್ತು ದುರಸ್ತಿಗೆ SDPI ಆಗ್ರಹ
ವಿರಾಜಪೇಟೆ, ಸೆ.10: ಅಯ್ಯಂಗೇರಿಯಿಂದ ತಲಕಾವೇರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿರುವ ಕುಯ್ಯಂಬುಡಿ ಮೇಲ್ಸೇತುವೆ ಇದೀಗ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ ಎಂದು SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಮುನೀರ್ ಎಂ.ಎ. ಅಯ್ಯಂಗೇರಿ ಆರೋಪಿಸಿದ್ದಾರೆ.

ಸೇತುವೆಯ ಹಲವೆಡೆ ಹಾನಿಗೊಳಗಾಗಿದ್ದು, ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಪವಿತ್ರ ಯಾತ್ರಾ ಸ್ಥಳ ತಲಕಾವೇರಿಗೆ ತೆರಳುವ ಭಕ್ತರು ಇದೇ ಮಾರ್ಗವನ್ನು ಬಳಸುತ್ತಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸೇತುವೆಯ ತಾಂತ್ರಿಕ ಪರಿಶೀಲನೆ ಮಾಡಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಅಪಾಯಕಾರಿಯಾಗಿದ್ದರೆ ವಾಹನ ಸಂಚಾರಕ್ಕೆ ಸುರಕ್ಷತಾ ವ್ಯವಸ್ಥೆ ಕಲ್ಪಿಸಿ, ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ವಿಶೇಷ ಗಮನ ಹರಿಸಿ, ಅನಾಹುತ ಸಂಭವಿಸುವ ಮುನ್ನವೇ ಸೇತುವೆಯ ಸಂಪೂರ್ಣ ದುರಸ್ತಿ ಅಥವಾ ಪುನರ್‌ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಜನರ ಜೀವ ಮತ್ತು ಸುರಕ್ಷತೆಯ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಅನಾಹುತದ ನಂತರ ಪರಿಹಾರ ಹುಡುಕುವುದಕ್ಕಿಂತ ಮುನ್ನೆಚ್ಚರಿಕೆ ಮುಖ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.