ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ವತಿಯಿಂದ ಕೈಲ್ ಪೋದ್ ನಮ್ಮೆ
admincoorgdaily

ವಿರಾಜಪೇಟೆ:ಹಬ್ಬಗಳನ್ನು ಎಲ್ಲರ ಜೊತೆಯಲ್ಲಿ ಜೊತೆಯಾಗಿ ಸೇರಿ ಆಚರಿಸುವುದರಿಂದ ಸಿಗುವಂತಹ ಸಂತಸವೇ ಬೇರೆ ಎಂದು ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅವರು ಅಭಿಪ್ರಾಯಪಟ್ಟರು.
ಅವರು ವಿರಾಜಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕೈಲ್ ಪೊಲ್ಧ್ ನಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೈಲ್ ಪೊಲ್ಧ್ ಹಬ್ಬವು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆಯನ್ನು ನೀಡುವ ಹಬ್ಬ ಇದಾಗಿದ್ದು ಜನರು ಎಲ್ಲರೂ ಒಂದೆಡೆ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ. ಇಂದು ನಾವು ನಮ್ಮ ಒಕ್ಕೂಟದ ವತಿಯಿಂದ ಈ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದು ಸರ್ವ ಸದಸ್ಯರು ಸಹಕಾರವನ್ನು ನೀಡಿರುತ್ತಾರೆ. ಒಕ್ಕೂಟದ ಸದಸ್ಯರೆಲ್ಲರೂ ಸಭೆ ಸಮಾರಂಭಗಳಿಗೆ ಹಾಜರಾಗಬೇಕು.
ಹಾಜರಾದಾಗ ಮಾತ್ರ ಮಾಹಿತಿಗಳನ್ನು ತಿಳಿಸಲು ಸುಲಭವಾಗುತ್ತದೆ. ಸದಸ್ಯರು ತಮ್ಮ ಮನೆಯಲ್ಲಿ ದಿನನಿತ್ಯದ ಕರ್ತವ್ಯಗಳನ್ನು ನಿಭಾಯಿಸುವ ರೀತಿಯಲ್ಲಿ ಒಕ್ಕೂಟದ ಕೆಲಸವನ್ನು ಸಹ ನಿಭಾಯಿಸಿದಲ್ಲಿ ಮತ್ತಷ್ಟು ಯಶಸ್ಸು ಕಾಣಬಹುದು. ಸದಸ್ಯರೆಲ್ಲರೂ ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಹೇಳಿದರು. ಸರ್ವರಿಗೂ ಕೈಲ್ ಪೊಲ್ಧ್ ನಮ್ಮೆಯ ಶುಭಾಶಯಗಳನ್ನು ತಿಳಿಸಿದರು.
ಭೋಜಕ್ಕ ತಂಡದ ನಾಯಕಿ ಮಾಲೇಟಿರ ಸ್ವಾತಿ ಕುಶಾಲಪ್ಪ ಅವರು ಹಬ್ಬದ ಕುರಿತು ಮಾತನಾಡುತ್ತಾ ಸಂದೇಶವನ್ನು ನೀಡಿ ಶುಭ ಕೋರಿದರು.ಹಬ್ಬದ ಪ್ರಯುಕ್ತ ವಾಲಗ ಆಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನವನ್ನು ಐಚಂಡ ವೀಣಾ, ದ್ವಿತೀಯ ಬಹುಮಾನವನ್ನು ಪುಡಿಯಂಡ ಲಲಿತ, ತೃತೀಯ ಬಹುಮಾನವನ್ನು ಕರೋಟಿರ ಶಶಿ ಸುಬ್ರಮಣ್ಯ ಅವರು ಪಡೆದುಕೊಂಡರು. ಸಂಘದ ಸದಸ್ಯರುಗಳಿಗೆ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳನ್ನು ಭೋಜಕ್ಕ ತಂಡದವರು ನಡೆಸಿಕೊಟ್ಟರು.
ಕಾಲ್ ಚೆಂಡು ಪಂದ್ಯಾಟದಲ್ಲಿ ಕುಂಇರ ಚಿತ್ರ ಪ್ರಥಮ, ಪುಗ್ಗೇರ ಭವಾನಿ ದ್ವಿತೀಯ, ಹಾಗೂ ಕುಪ್ಪಚಿರ ಕವಿತಾ ತೃತೀಯ ಬಹುಮಾನವನ್ನು ಪಡೆದುಕೊಂಡರು. ತೆಂಗಿನಕಾಯಿ ಗುರಿ ಸ್ಪರ್ಧೆಯಲ್ಲಿ ಮಾಚೆಟ್ಟಿರ ರುಕ್ಮಿಣಿ ಪ್ರಥಮ, ಅಲ್ಲಪಂಡ ತಾರ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.
ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಕು0ಇರ ಚಿತ್ರ ಚರ್ಮಣ ವರದಿಯನ್ನು ಮಂಡಿಸಿದರು. ತಾತಂಡ ಯಶು ಕಬೀರ್ ಲೆಕ್ಕ ಪತ್ರವನ್ನು ಮಂಡಿಸಿದರು. ಮಂಡೇಪಂಡ ಶರೀನ್ ಹಾಗೂ ಕರ್ನಾಂಡ ಪ್ರಮೀಳಾ ಪ್ರಾರ್ಥಿಸಿ, ಐನ0ಡ ಜಮುನಾ ಸ್ವಾಗತಿಸಿ, ಕರೋಟಿರ ಶಶಿ ಸುಬ್ರಮಣ್ಯ ನಿರೂಪಿಸಿ, ಕರ್ನಾಂಡ ಪ್ರಮೀಳಾ ಜಯ ವಂದಿಸಿದರು. ಹಬ್ಬದ ಪ್ರಯುಕ್ತ ಸರ್ವರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ತದನಂತರ ಸದಸ್ಯರುಗಳು ತಾವು ತಯಾರಿಸಿದ ವಿವಿಧ ವಸ್ತುಗಳ ಮಳಿಗೆಯನ್ನು ಇಟ್ಟರು. ಈ ಸಂದರ್ಭದಲ್ಲಿ ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.