ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ವಿರಾಜಪೇಟೆಯ ಭರತನಾಟ್ಯ ಪ್ರತಿಭೆ ಲಾವಣ್ಯ ಬೋರ್ಕರ್
admincoorgdaily

ವಿರಾಜಪೇಟೆ: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವಿರಚಿತ ಆಯ್ದ ಕೃತಿಗಳಿಗೆ ಎರಡು ಸಾವಿರ ಮಕ್ಕಳು ಭರತನಾಟ್ಯ ಸಮರ್ಪಣೆ ಮಾಡಿದರು.
ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಗೆ ಸೇರ್ಪಡೆಯಾಗುವ ಪ್ರಯತ್ನ ಇದಾಗಿದ್ದು ಹೊಸ ವಿಶ್ವ ದಾಖಲೆಯನ್ನು ಇದು ನಿರ್ಮಾಣ ಮಾಡಲಿದೆ. ಈ ಭರತನಾಟ್ಯ ನೃತ್ಯ ಸಮರ್ಪಣೆಯಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಹಾಗೂ ಯುವ ಪ್ರತಿಭೆ ಲಾವಣ್ಯ ಬೋರ್ಕರ್ ಅವರು ಭಾಗವಹಿಸಿ ಭರತನಾಟ್ಯ ಪ್ರದರ್ಶನವನ್ನು ನೀಡುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿಗಳು ಆಗಮಿಸಿ ಇದರ ದಾಖಲೀಕರಣವನ್ನು ಮಾಡಿಕೊಂಡಿರುತ್ತಾರೆ.
ಹಲವಾರು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಲಾವಣ್ಯ ಬೋರ್ಕರ್ ಅವರು ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ನ ಮುಖ್ಯಸ್ಥರಾದ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆಯಾಗಿದ್ದಾಳೆ.
ಮೂಲತ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದ ನಿವಾಸಿಯಾಗಿರುವ ಲಾವಣ್ಯ ಬೋರ್ಕರ್, ನಾಟಿ ವೈದ್ಯ ನಟರಾಜ್ ಬೋರ್ಕರ್ ಹಾಗೂ ಸುನಂದ ಬೋರ್ಕರ್ ದಂಪತಿಗಳ ಪುತ್ರಿ. ಪ್ರಸ್ತುತ ಲಾವಣ್ಯ ಸುಳ್ಯದ ಕೆ ವಿ ಜಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಎ ಸ್ನಾತಕೋತ್ತರ ತರಗತಿಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಾವಣ್ಯ ಬೋರ್ಕರ್ ಅವರನ್ನು ಹಲವಾರು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಪ್ರಸಂಶನ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಡಾ. ಸಿ. ಎನ್. ಮಂಜುನಾಥ್, ಕನಕಪುರದ ಮರಳೆ ಗವಿಮಠ ಕ್ಷೇತ್ರದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ಹಾಗೂ ಆಯೋಜಕರಾದ ಎಂ ಮಂಜುನಾಥ್, ದೀಪಾ ರಾವ್ , ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.