ವಿರಾಜಪೇಟೆಯಲ್ಲಿ ಕಾನೂನು ಅರಿವು ಮತ್ತು ಪೌಷ್ಠಿಕಾಂಶ ಅಭಿಯಾನ ಯಶಸ್ವಿ: ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಆರೋಗ್ಯದ ಪಾಠ
admincoorgdaily

ವಿರಾಜಪೇಟೆ: ಇಂದಿನ ಸ್ಪರ್ಧಾತ್ಮಕ ಹಾಗೂ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾನೂನಿನ ಪ್ರಾಥಮಿಕ ಅರಿವು ಮತ್ತು ದೃಢವಾದ ಆರೋಗ್ಯಕ್ಕಾಗಿ ಪೌಷ್ಠಿಕಾಂಶದ ಮಹತ್ವವನ್ನು ಅರಿಯುವುದು ಅತ್ಯಂತ ಅವಶ್ಯಕ ಎಂದು ಕೊಡಗು ಮಡಿಕೇರಿಯ 2ನೇ ಅಪರ ಜಿಲ್ಲಾ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್. ನಟರಾಜು ಅವರು ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಜಂಟಿ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ "ಕಾನೂನು ಅರಿವು ಮತ್ತು ಪೌಷ್ಠಿಕಾಂಶ ಅಭಿಯಾನ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುಡ್ ಟಚ್, ಬ್ಯಾಡ್ ಟಚ್ ಹಾಗೂ ಪೋಕ್ಸೋ ಕಾಯಿದೆ ಕುರಿತು ಜಾಗೃತಿ:
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಎದುರಾಗಬಹುದಾದ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಮಕ್ಕಳ ರಕ್ಷಣೆಗಾಗಿ ಇರುವ ಕಠಿಣ 'ಪೋಕ್ಸೋ ಕಾಯಿದೆ'ಯ ಕುರಿತು ತಿಳಿವಳಿಕೆ ಅಗತ್ಯ ಎಂದರು.
ಇಂದಿನ ಹದಿಹರೆಯದ ಮಕ್ಕಳು ದಾರಿ ತಪ್ಪದಂತೆ ಎಚ್ಚರಿಕೆ ವಹಿಸಬೇಕು, ಅಪರಿಚಿತರ ಆಮಿಷಗಳಿಗೆ ಬಲಿಯಾಗಬಾರದು ಮತ್ತು ಯಾವುದೇ ರೀತಿಯ ಅನ್ಯಾಯ ಅಥವಾ ದೌರ್ಜನ್ಯ ಎದುರಾದಾಗ ಮೌನವಾಗಿರದೆ ತಕ್ಷಣವೇ ಶಿಕ್ಷಕರು, ಪೋಷಕರು ಅಥವಾ ಕಾನೂನು ಅಧಿಕಾರಿಗಳ ಬಳಿ ಧೈರ್ಯವಾಗಿ ಧ್ವನಿ ಎತ್ತುವಂತೆ ಕಿವಿಮಾತು ಹೇಳಿದರು. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಅವರ ವಿವಿಧ ಕಾನೂನು ಸಂಶಯಗಳಿಗೆ ಸವಿವರವಾದ ಉತ್ತರಗಳನ್ನು ನೀಡಿದರು.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ಡ್ರಗ್ಸ್ನಿಂದ ದೂರವಿರಿ:
ಕಾರ್ಯಕ್ರಮದಲ್ಲಿ ಘನ ಉಪಸ್ಥಿತರಿದ್ದ ವಿರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಆದ ಗೌರವಾನ್ವಿತ ನ್ಯಾಯಮೂರ್ತಿ ವಿಶ್ವನಾಥ್ ಎ. ಅವರು ಮಾತನಾಡಿ, ಇಂದಿನ ಯುವ ಜನತೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಅತಿ ಹೆಚ್ಚು ಬಳಸುತ್ತಿದ್ದು, ಇದರ ಅತಿ ಬಳಕೆ ಹಾಗೂ ದುರ್ಬಳಕೆ ಕಾನೂನು ತೊಡಕುಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಯುವ ಸಮೂಹವನ್ನು ಹಾಳು ಮಾಡುತ್ತಿರುವ 'ಮಾದಕ ದ್ರವ್ಯ' ವ್ಯಸನದ ಜಾಲಕ್ಕೆ ಸಿಲುಕಿಕೊಳ್ಳಬೇಡಿ. ಕಾಲೇಜು ಹಾಗೂ ವಸತಿ ನಿಲಯಗಳ ಆವರಣದಲ್ಲಿ ರಾಗಿಂಗ್ ಅಥವಾ ಯಾವುದೇ ರೀತಿಯ ದೌರ್ಜನ್ಯಗಳಿಗೆ ಅವಕಾಶವಿಲ್ಲದ ಕಾನೂನಿನ ಕಠಿಣ ಚೌಕಟ್ಟುಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಸಿ.ಕೆ. ಪೂವಣ್ಣ ಅವರು ಮಾತನಾಡಿ, ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ÷್ಯ ಹಾಗೂ ಹಕ್ಕುಗಳ ಜೊತೆಗೆ ನಿರ್ದಿಷ್ಟ ಕರ್ತವ್ಯಗಳನ್ನು ನೀಡಿದೆ. ಸಂವಿಧಾನದ ಆಶಯಗಳನ್ನು ಅರಿತುಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು.
ಆರೋಗ್ಯಕರ ಬೆಳವಣಿಗೆಗೆ
ಪೌಷ್ಠಿಕಾಂಶದ ಪಾತ್ರ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ಯಾನಲ್ ವಕೀಲರಾದ ಬಿ.ಎನ್. ತಿಮ್ಮಯ್ಯ ಅವರು ಕಾನೂನು ನಿಯಮಗಳ ಜೊತೆಗೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೌಷ್ಠಿಕ ಆಹಾರದ ಪ್ರಾಮುಖ್ಯತೆಯನ್ನು ವಿವರಿಸಿದರು. ಹದಿಹರೆಯದಲ್ಲಿ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಯುಕ್ತ ಆಹಾರದ ಕೊರತೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಜಗದೀಶ್ ಎಂ. ವಹಿಸಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಮೇಲ್ವಿಚಾರಕರಾದ ಸುಮಯ್ಯ,. ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಆಯೇಷಾ ಖಾನಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.