ಮಡಿಕೇರಿ-ಗೋಣಿಕೊಪ್ಪ ದಸರಾಗೆ ಕಾನೂನು ನೋಟಿಸ್ ಬಿಸಿ;75 ಡೆಸಿಬಲ್ ಮೀರಿದರೆ ಕ್ರಿಮಿನಲ್ ಕೇಸ್
admincoorgdaily

ಮಡಿಕೇರಿ: 2026ರ ಮಡಿಕೇರಿ, ಗೋಣಿಕೊಪ್ಪ ಸೇರಿದಂತೆ ಕೊಡಗು ಜಿಲ್ಲೆಯ ನಾನಾ ಭಾಗಗಳ ದಸರಾ ಆಚರಣೆ ವೇಳೆ ಶಬ್ದಮಾಲಿನ್ಯ ಹಾಗೂ ಅಪಾಯಕಾರಿ ಬೆಳಕು, ಹೊಗೆ ಮತ್ತು ಪೈರೋಟೆಕ್ನಿಕ್ಸ್ ಬಳಕೆಯನ್ನು ನಿಯಂತ್ರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾನೂನು ನೋಟಿಸ್ ಜಾರಿಯಾಗಿದೆ.
ಬೆಂಗಳೂರು ಹೈಕೋರ್ಟ್ ವಕೀಲರಾದ ದೀಕ್ಷಾ ಎನ್. ಅಮೃತೇಶ್ ಅವರ ಕಚೇರಿಯಿಂದ ಸೆ.25ರಂದು ಈ ಕಾನೂನು ನೋಟಿಸ್ ಜಾರಿಯಾಗಿದ್ದು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪರಿಸರ ಮಾಲಿನ್ಯ ಅಧಿಕಾರಿಗಳು, ಮಡಿಕೇರಿ ನಗರ ಪೊಲೀಸ್ ಸೇರಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್‌ನಲ್ಲಿ ರಾತ್ರಿ 10 ಗಂಟೆಯ ಬಳಿಕ ಹೈ-ಡೆಸಿಬಲ್ ಶಬ್ದ ಹಾಗೂ ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುವಂತೆ ಮತ್ತು ಅನುಮತಿಸಲಾದ ಸಮಯದಲ್ಲಿ ಶಬ್ದಮಟ್ಟವನ್ನು 75 ಡೆಸಿಬಲ್‌ಗೆ ಮಿತಿಗೊಳಿಸುವಂತೆ ಆಗ್ರಹಿಸಲಾಗಿದೆ.
ಅಲ್ಲದೆ, ಹೈ-ಇಂಟೆನ್ಸಿಟಿ ಲೇಸರ್ ಲೈಟ್, ಸ್ಟ್ರೋಬ್ ಲೈಟ್, ಕೆಮಿಕಲ್ ಸ್ಮೋಕ್ ಮೆಷಿನ್ ಹಾಗೂ ಅನುಮತಿಯಿಲ್ಲದ ಪೈರೋಟೆಕ್ನಿಕ್ಸ್ ಪ್ರದರ್ಶನಗಳನ್ನು ನಿಷೇಧಿಸುವಂತೆ ಕಾನೂನು ನೋಟಿಸ್‌ನಲ್ಲಿ ಕೋರಲಾಗಿದೆ.
ಎಲ್ಲ 10 ದಶಮಂಟಪ ಸಮಿತಿಗಳು ಹಾಗೂ ಧ್ವನಿ ಉಪಕರಣ ಪೂರೈಕೆದಾರರಿಂದ ರೂ. 100 ಸ್ಟ್ಯಾಂಪ್ ಪೇಪರ್‌ನಲ್ಲಿ ನಿಯಮ ಪಾಲನೆಯ ಮುಚ್ಚಳಿಕೆ ಪಡೆಯಬೇಕು ಮತ್ತು ಉಲ್ಲಂಘನೆ ಕಂಡುಬಂದಲ್ಲಿ ಉಪಕರಣಗಳನ್ನು ವಶಪಡಿಸಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.