ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನಲ್ಲಿ ಕಾನೂನು ಸೇವಾ ದಿನಾಚರಣೆ
admincoorgdaily

ವಿರಾಜಪೇಟೆ;ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ, ವಿರಾಜಪೇಟೆ, ತಾಲೂಕು ಕಾನೂನು ಸೇವೆಗಳ ಸಮಿತಿ ವಿರಾಜಪೇಟೆ ಹಾಗೂ ವಕೀಲರ ಸಂಘ ವಿರಾಜಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನಲ್ಲಿ ಬುಧವಾರ ಕಾನೂನು ಸೇವಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ನ್ಯಾ. ಎ.ವಿಶ್ವನಾಥ್ ಪ್ರತಿವರ್ಷ ನವೆಂಬರ್ 9 ರಂದು ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಜಾರಿಗೆಬಂದ ದಿನವನ್ನು ಕಾನೂನು ಸೇವೆಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಣದ ಸಮಸ್ಯೆಯಿಂದ ಜನರು ನ್ಯಾಯದಿಂದ ವಂಚಿತರಾಗಕೂಡದು ಮತ್ತು ಉಚಿತ ಕಾನೂನಿನ ನೆರವು ದೇಶದ ಕಟ್ಟಕಡೆಯ ಪ್ರಜೆಗೂ ತಲುಪಬೇಕು. ಹಾಗೆಯೇ ಇದು ರಾಜ್ಯನೀತಿ ನಿರ್ದೇಶಕ ತತ್ವದ ಅಡಿಯಲ್ಲಿ ಸಂವಿಧಾನದ ಅನುಚ್ಛೇದ 39A ಅಡಿಯಲ್ಲಿ ಸಂವಿಧಾನವು ಅಸಹಾಯಕರಿಗೆ ದುರ್ಬಲರಿಗೆ ಉಚಿತ ಕಾನೂನು ಸೇವೆಯನ್ನು ಒದಗಿಸಬೇಕೆಂದು ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಉಚಿತ ಕಾನೂನು ಸೇವೆಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಸಿ. ಕೆ ಪೂವಣ್ಣ , ಹಿರಿಯ ವಕೀಲರಾದ ಬಿ. ಎನ್ ತಿಮ್ಮಯ್ಯ ಕಾಲೇಜಿನ ಪ್ರಾಂಶುಪಾಲರಾದ ವಿನೀತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿಗಳು , ವಿದ್ಯಾರ್ಥಿಗಳು ಹಾಜರಿದ್ದರು.