ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಲಿ: ಗೋಪಾಲ ಪೆರಾಜೆ
admincoorgdaily

ಮಡಿಕೇರಿ:-ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಪುನಃ ಅವರಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಪೆರಾಜೆ ಅವರು ನುಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮೂರ್ನಾಡು ಗೌಡ ಸಮಾಜ ಹಾಗೂ ಗೌಡ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ಭಾನುವಾರ ಮೂರ್ನಾಡಿನ ಗೌಡ ಸಮಾಜದಲ್ಲಿ ನಡೆದ ಕಥೆ ಬರೆಯುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರೆಭಾಷೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸುವುದು ಹಾಗೂ ಕಥೆ ಬರೆಯುವ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಗೌಡ ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಹರೀಶ್ ಅವರು ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಳಕೆಯಿಂದ ಮಕ್ಕಳು ಹೊರಬರಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ. ಇದರಿಂದ ಸಾಹಿತ್ಯದಲ್ಲಿ ಬೆಳವಣಿಗೆ ಸಾಧ್ಯ ಎಂದರು.
ಕಥೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ತೆಕ್ಕಡೆ ಕುಮಾರಸ್ವಾಮಿ, ಕಥೆ ಎನ್ನುವುದು ಕೇವಲ ಕಲ್ಪನೆಯ ಅಭಿವ್ಯಕ್ತಿಯಲ್ಲ. ನಮ್ಮ ಸುತ್ತಮುತ್ತಲಿನ ಬದುಕು, ಸಂಬಂಧಗಳು, ಅನುಭವಗಳು, ಭಾವನೆಗಳು ಮತ್ತು ಸಮಾಜದ ವಿಚಾರಗಳನ್ನು ಸುಂದರವಾಗಿ ಕಟ್ಟಿಕೊಡುವ ಒಂದು ಶಕ್ತಿಯುತ ಮಾಧ್ಯಮ. ವಿಶೇಷವಾಗಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಆಸಕ್ತಿಯನ್ನು ಬೆಳೆಸುವಲ್ಲಿ ಕಥೆಗಳಿಗೆ ಮಹತ್ವದ ಪಾತ್ರವಿದೆ ಎಂದರು. ನಂತರ ಮಕ್ಕಳಿಗೆ ಕಥೆ ಬರೆಯುವುದರ ಬಗ್ಗೆ, ಕಥೆಗಳ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದರು.
ಅರೆಭಾಷೆ ಅಕಾಡೆಮಿ ಸದಸ್ಯರಾದ ವಿನೋದ್ ಮೂಡಗದ್ದೆ ಅವರು ಮಕ್ಕಳಿಗೆ ಕಥೆ ಬರೆಯುವುದರ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಕಥೆಗೆ ಉತ್ತಮವಾದ ವಿಷಯವನ್ನು ಹೇಗೆ ಆಯ್ಕೆ ಮಾಡಬೇಕು, ಕಥೆಯ ಆರಂಭ, ಬೆಳವಣಿಗೆ ಮತ್ತು ಅಂತ್ಯವನ್ನು ಹೇಗೆ ರೂಪಿಸಬೇಕು, ಪಾತ್ರಗಳನ್ನು ಹೇಗೆ ಸೃಷ್ಟಿಸಬೇಕು, ನಮ್ಮದೇ ಆದ ಅನುಭವಗಳನ್ನು ಕಥೆಯ ರೂಪಕ್ಕೆ ಹೇಗೆ ತರಬೇಕು ಎಂಬ ಹಲವು ವಿಷಯಗಳ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಅಕಾಡೆಮಿ ಸದಸ್ಯ ಸೂದನ ಈರಪ್ಪ, ಮೇರ್ಕಜೆ ಲೋಹಿತ್ ಸೋಮಯ್ಯ, ತೆಕ್ಕಡೆ ಪ್ರಸನ್ನ, ಮಹಿಳಾ ಒಕ್ಕೂಟದ ಆಡಳಿತ ಮಂಡಳಿ ಸದಸ್ಯೆಯರು ಹಾಜರಿದ್ದರು.
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ ಚಿಂತು ಸ್ವಾಗತಿಸಿ, ತೆಕ್ಕಡೆ ಆಶಾ ಪ್ರಸನ್ನ ವಂದಿಸಿದರು. ಮಹಿಳಾ ಒಕ್ಕೂಟದ ಸದಸ್ಯರು ಪ್ರಾರ್ಥಿಸಿದರು. ಕೊಂಪುಳಿ ಮಮತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ 16 ವರ್ಷದೊಳಗಿನ ಸುಮಾರು 40 ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಅರೆಭಾಷೆ ಅಕಾಡೆಮಿಯ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕ ವಿತರಿಸಲಾಯಿತು.