Kodagu

ಯುವ ಪೀಳಿಗೆ ಅಧಿಕಾರ ಹಸ್ತಾಂತರಿಸಿಕೊಳ್ಳಲಿ; ಕೆ.ಪಿ.ಸುಬ್ರಮಣಿ ಕರೆ

admincoorgdaily

ಯುವ ಪೀಳಿಗೆ ಅಧಿಕಾರ ಹಸ್ತಾಂತರಿಸಿಕೊಳ್ಳಲಿ; ಕೆ.ಪಿ.ಸುಬ್ರಮಣಿ ಕರೆ
ಪೊನ್ನಂಪೇಟೆ, ಸೆ 14: ಕೊಡವ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ 2017ರಲ್ಲಿ ಆರಂಭಗೊಂಡ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿ-ಯೂನಿವರ್ಸಿಟಿ ಕಾಲೇಜು (CIPUC) 9 ಯಶಸ್ವಿ ವರ್ಷಗಳನ್ನು ಪೂರೈಸಿ 10ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ *'X QUESTA - The Quest for Knowledge and Creativity'* ಎಂಬ ವಿಶೇಷ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕೊಡವ ಎಜುಕೇಷನ್ ಸೊಸೈಟಿ ನಿರ್ದೇಶಕ ಕೆ.ಪಿ. ಸುಬ್ರಮಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ಹುಟ್ಟಿನಿಂದ ಚಿತಾಭಸ್ಮದವರೆಗೂ ಸಮಾಜಕ್ಕೆ ಸಂಘ-ಸಂಸ್ಥೆಗಳ ಅಗತ್ಯವಿದೆ. ಕೊಡವ ಎಜುಕೇಶನ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಡಾ. ಚೆಂಗಪ್ಪ ಅವರಂತಹವರ ಸೇವೆ ಮಹತ್ವದ್ದಾಗಿದೆ. ಮುಂದಿನ 20-30 ವರ್ಷಗಳಲ್ಲಿ ಯುವಕ-ಯುವತಿಯರು ಸ್ಥಳೀಯ ಸಂಘ-ಸಂಸ್ಥೆಗಳು, ಸಹಕಾರಿ ಬ್ಯಾಂಕ್ ಮುಂತಾದ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಬೇಕು. ನಾವು ಹಿರಿಯರಾಗುತ್ತಿದ್ದು, ಮುಂದಿನ ಪೀಳಿಗೆಗೆ ಅಧಿಕಾರ ಮತ್ತು ಜವಾಬ್ದಾರಿಯನ್ನು ಹಸ್ತಾಂತರಿಸುವ ಅಗತ್ಯವಿದೆ. ನಮ್ಮ ಹಿರಿಯರು ತಮ್ಮ ಪರಿಶ್ರಮದಿಂದ ಇಂತಹ ಮಹತ್ವದ ಸಂಸ್ಥೆಗಳನ್ನು ಕಟ್ಟಿದ್ದಾರೆ. ಯುವ ಪೀಳಿಗೆ ಅವರ ಹಾದಿ ಅನುಸರಿಸಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಂಸ್ಥೆಗಳನ್ನು ನಿರ್ಮಿಸಬೇಕು" ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಮಾತನಾಡಿ, "ವಿದ್ಯಾರ್ಥಿಗಳ ಯಶಸ್ಸು ಕೇವಲ 100ಕ್ಕೆ 100 ಅಂಕ ಗಳಿಸುವುದರಲ್ಲಿ ಇಲ್ಲ, ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ಶಿಕ್ಷಣದ ಜೊತೆಗೆ ಪ್ರತಿಭೆ, ಸೃಜನಶೀಲತೆ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯ ಹಿನ್ನೆಲೆಯಿಂದ ಬಂದವರು ಪರಿಶ್ರಮದಿಂದ ದೊಡ್ಡ ಸಾಧನೆ ಮಾಡಿದ್ದಾರೆ ಎಂಬುದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಶಿಕ್ಷಕರು ಪಠ್ಯ ಬೋಧನೆಗೆ ಸೀಮಿತರಾಗದೆ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮತ್ತು ಸಾಧನೆಯ ಛಲ ಮೂಡಿಸಬೇಕು. ತರಗತಿಯಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಜ್ಞಾನ ಮತ್ತು ವಿಶಾಲ ದೃಷ್ಟಿಕೋನ ಬೆಳೆಸಬೇಕು" ಎಂದು ಹೇಳಿದರು.

ಸಿಐಪಿಯುಸಿ ಪ್ರಾಂಶುಪಾಲೆ ರೋಹಿಣಿ ತಿಮ್ಮಯ್ಯ ಮಾತನಾಡಿ, “ಕಾಲೇಜು ಆವರಣದಲ್ಲಿ ನಡೆದ ‘ಎಕ್ಸ್-ಕ್ವೆಸ್ಟಾ’ ಕಾರ್ಯಕ್ರಮದಲ್ಲಿ 28 ಶಾಲೆಗಳ ಸುಮಾರು 300 ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ವಿಜ್ಞಾನ, ಗಣಿತ, ತಾರ್ಕಿಕ ಸಾಮರ್ಥ್ಯ ಹಾಗೂ ತಂತ್ರಜ್ಞಾನ ವಿಷಯಗಳನ್ನೊಳಗೊಂಡ ಆನ್‌ಲೈನ್ ರಸಪ್ರಶ್ನೆ ಮತ್ತು ವಿವಿಧ ವಿಷಯಾಧಾರಿತ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಸ್ಪರ್ಧೆಗಳ ಫಲಿತಾಂಶ: 

ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಧ್ರುವ ವಿ ಭಾರದ್ವಾಜ್ ₹.10000, ದ್ವಿತೀಯ ಕ್ರಿಶ್ ಜಾಸ್ವಾಲ್₹9000, ತೃತೀಯ ಗಗನ್₹ 8000 ನಗದು ಬಹುಮಾನವನ್ನು ಪಡೆದುಕೊಂಡರು. ನೃತ್ಯ ಸ್ಪರ್ಧೆಯಲ್ಲಿ ಮೂರ್ನಾಡಿನ ಜ್ಞಾನಜ್ಯೋತಿ ಪ್ರೌಢಶಾಲೆಯ ರೂಟ್ಸ್ ಟು ವಿನ್ ತಂಡ ಪ್ರಥಮ ₹ 6000 ಹಾಗೂ ದ್ವಿತೀಯ ಸ್ಥಾನವನ್ನು ವಿರಾಜಪೇಟೆಯ ಎಸ್ಎಂಎಸ್ ಶಾಲೆಯ ನೃತ್ಯ ಮಂಡಲ ತಂಡ 5000 ನಗದು ಬಹುಮಾನ ಪಡೆದುಕೊಂಡಿತು. ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಶಾಸ್ತ್ರೀಯ ಗಾಯಕಿ ಮತ್ತು ನೃತ್ಯ ಸಂಯೋಜಕಿ ಚೇಂದಿರ ನಿರ್ಮಲ ಬೋಪಣ್ಣ ಹಾಗೂ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ನಾಟ್ಯ ನಿರ್ದೇಶಕಿ ಪ್ರೇಕ್ಷಾ ಭಟ್ ಭಾಗವಹಿಸಿದ್ದರು.
ಸ್ಪರ್ಧಿಗಳು ರೂಟ್ಸ್ ಆಫ್ ವಿಂಗ್ ಮತ್ತು ಪಂಚತತ್ವ ಎಂಬ ಥೀಮ್ ಆಧರಿಸಿ ಅಮೋಘ ಕಥಾಹಂದರವನ್ನು ಸೃಜನಾತ್ಮಕವಾಗಿ ಸೃಷ್ಟಿಸಿ ಅಭಿನಯಿಸಿ, ನೃತ್ಯ ಮಾಡಿದರು. ಕಾರ್ಯಕ್ರಮದ ಸಂಯೋಜಕರಾಗಿ ಡಾ.ಸುಷ್ಮಿತಾ ಹಾಗೂ ಶೃತಿ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಿ.ಐ.ಟಿ ಪ್ರಾಂಶುಪಾಲ ಡಾ.ಎಂ ಬಸವರಾಜ್, ವಿವಿಧ ಶಾಲೆಗಳ ಶಿಕ್ಷಕರು ,ವಿದ್ಯಾರ್ಥಿಗಳು, ಸಿ.ಐ.ಪಿ.ಯು ಕಾಲೇಜಿನ ಶಿಕ್ಷಕ ವೃಂದದವರು, ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.