CRIME

₹500 ಗಾಗಿ ಜೀವವೇ ಬಲಿ! ಗಾಂಜಾ ಗ್ಯಾಂಗ್ ಅಟ್ಟಹಾಸ

admincoorgdaily

₹500 ಗಾಗಿ ಜೀವವೇ ಬಲಿ! ಗಾಂಜಾ ಗ್ಯಾಂಗ್ ಅಟ್ಟಹಾಸ
ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಕೇವಲ ₹500 ರೂಪಾಯಿಗಾಗಿ ನಾಲ್ವರು ಯುವಕರು ಕೂಲಿ ಕಾರ್ಮಿಕನೊಬ್ಬನನ್ನು ಡ್ರ್ಯಾಗರ್‌ನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ.

ಘಟನೆ ನಡೆದಿದ್ದು ಎಲ್ಲಿ, ಹೇಗೆ?

ಅಶೋಕ ನಗರದ ತುಂಗಾ ಚಾನೆಲ್ ಬಳಿ ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ಎರಡು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ಯುವಕರು ಗಾಂಜಾ ಅಮಲಿನಲ್ಲಿದ್ದರು ಎಂದು ಹೇಳಲಾಗಿದೆ.

ಈ ವೇಳೆ ಅಲ್ಲೇ ಇದ್ದ ಕೂಲಿ ಕಾರ್ಮಿಕ ಮಹ್ಮದ್ ಅಲಿ ಅವರ ಕೈಯಲ್ಲಿ ₹500 ನೋಟು ಇರುವುದನ್ನು ಗಮನಿಸಿದ ಯುವಕರು, ಅವರ ಬಳಿ ತೆರಳಿ ಹಣಕ್ಕಾಗಿ ಪೀಡಿಸಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಹ್ಮದ್ ಅಲಿ ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ಯುವಕರು ಡ್ರ್ಯಾಗರ್‌ನಿಂದ ಅವರಿಗೆ ಇರಿದು, ಅವರ ಬಳಿ ಇದ್ದ ₹500 ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಹ್ಮದ್ ಅಲಿ ರಕ್ತಸಿಕ್ತವಾಗಿ ರಸ್ತೆ ಬದಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪ್ರಕರಣ ದಾಖಲು:
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.