7 ದಶಕಗಳ ಕತ್ತಲೆಗೆ ಬೆಳಕು; ಹಾಡಿಗಳಿಗೆ ಮೊದಲ ಬಾರಿಗೆ ವಿದ್ಯುತ್ - ಶಾಸಕ ಎ.ಎಸ್.ಪೊನ್ನಣ್ಣರಿಂದ ಉದ್ಘಾಟನೆ
admincoorgdaily

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಪ್ರಮುಖ ಹಾಡಿಗಳಲ್ಲಿ ಒಂದಾದ ಚೀನಿ ಹಡ್ಲು ಹಾಡಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು.
ಈ ಭಾಗದ ಅನೇಕ ಹಾಡಿಗಳ ದಶಕದ ಕನಸಾಗಿದ್ದ ವಿದ್ಯುತ್ ಶಕ್ತಿ ಪೂರೈಕೆಯ ಬೇಡಿಕೆಯನ್ನು ಶಾಸಕರು ಈಡೇರಿಸಿದರು.
ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹಡ್ಲು ಹಾಡಿ ಹಾಗೂ ಬೊಂಬು ಕಾಡು ಹಾಡಿಯ ಸುಮಾರು 185ಕ್ಕೂ ಅಧಿಕ ಕುಟುಂಬಗಳಿಗೆ ರೂ. 4 ಕೋಟಿ 84 ಲಕ್ಷ ವೆಚ್ಚದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದ್ದು, ಈ ಸೌಲಭ್ಯದ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕರು ನೆರವೇರಿಸಿ ಶುಭ ಕೋರಿದರು.
ಸ್ಥಳದಲ್ಲಿ ಹಾಡಿ ನಿವಾಸಿಗಳ ಹರ್ಷೋದ್ಗಾರಗಳ ನಡುವೆ ವಿದ್ಯುತ್ ಸಂಪರ್ಕ ಉದ್ಘಾಟಿಸಿ ಮಾತನಾಡಿದ ಶಾಸಕರು, ಸ್ವಾತಂತ್ರ್ಯ ಬಂದ ನಂತರ ಈ ಹಾಡಿಯ ಜನರು ಸುಮಾರು 7 ದಶಕಗಳಿಂದ ನಿರಂತರವಾಗಿ ಕತ್ತಲೆಯಲ್ಲಿ ಜೀವನ ಕಳೆಯುತ್ತಿದ್ದರು. ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಯೂ ವಿದ್ಯುತ್ ಸೌಲಭ್ಯ ಕಲ್ಪಿಸುವ ಬದ್ಧತೆ ತೋರಿರಲಿಲ್ಲ. ಆದರೆ ತಾನು ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ, ಆಡಳಿತದ ಎಲ್ಲಾ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆಗಳನ್ನು ನಿವಾರಿಸಿಕೊಂಡು ಇಂದು ಈ ಹಾಡಿಯ ಸಾವಿರಾರು ನಿವಾಸಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಟ್ಟ ಆತ್ಮತೃಪ್ತಿ ದೊರಕಿದೆ, ಆ ಆತ್ಮತೃಪ್ತಿಯನ್ನು ನಿವಾಸಿಗಳ ಸಂತೋಷದಲ್ಲಿ ಕಾಣುತ್ತಿದ್ದೇನೆ ಎಂದು ಬಣ್ಣಿಸಿದರು.
ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ಜಾಗೃತವಾಗಿ ವಿದ್ಯುತ್ ಬಳಸುವುದರ ಜೊತೆಗೆ ತಮ್ಮ ಹಾಡಿಯ ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ಪ್ರೇರೇಪಿಸಬೇಕು ಎಂದು ನಿವಾಸಿಗಳಿಗೆ ಕಿವಿಮಾತು ಹೇಳಿದರು.
ಶಾಸಕರ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ನವೀನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾನಂಡ ಪ್ರತ್ಯು, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪಂಕಜ, ಡಿಸಿಸಿ ಸದಸ್ಯ ವಿನಯ್ ಕುಮಾರ್, ಪಂಚಾಯಿತಿ ಸದಸ್ಯರಾದ ಅಫ್ರೋಜ್, ಚುಬ್ರು, ಪಕ್ಷದ ಮುಖಂಡರಾದ ರಾಮು, ಮಲ್ಲಪ್ಪ, ಪಿ.ಸಿ. ರಾಮು, ಕುಂಡಚ್ಚಿರ ಮಂಜು ದೇವಯ್ಯ, ಮಧ್ಯಸ್ತ, ಮಣಿ, ಪುಷ್ಪ, ಫಿಲೋಮೀನಾ, ನಿಕಿತಾ ಹಾಗೂ ಸ್ಥಳೀಯ ಹಾಡಿ ನಿವಾಸಿಗಳು ಉಪಸ್ಥಿತರಿದ್ದರು.