ಗೋಣಿಕೊಪ್ಪಲಿನಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ
admincoorgdaily

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಜಿಎಂಪಿ ಶಾಲಾ ಮೈದಾನದಲ್ಲಿ ಶಿವಾಜಿ ಯುವಸೇನೆ (ರಿ) ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ ಮಾದರಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಕ್ರೀಡಾಕೂಟದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಹಾಗೂ ಅವರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು.
ಶಿವಾಜಿ ಯುವಸೇನೆ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಮ್ಯಾಟ್ ಕಬಡ್ಡಿ ಪ್ರೊ ಕಬಡ್ಡಿ ಪಂದ್ಯಾಟವನ್ನು ವೀಕ್ಷಿಸಿ ಮಾತನಾಡಿದ ಶಾಸಕರು, "ಭಾರತ ಮೂಲದ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಇತ್ತೀಚೆಗೆ ಅತ್ಯಂತ ಜನಪ್ರಿಯತೆ ಪಡೆಯುತ್ತಿದ್ದು, ನಾಡಿನ ಹಲವಾರು ಕಬಡ್ಡಿ ಪಟುಗಳು ಇಂದು ವಿಶ್ವವಿಖ್ಯಾತರಾಗಿದ್ದಾರೆ. ಈ ಭಾಗದಲ್ಲೂ ಹಲವಾರು ಕಬಡ್ಡಿ ಪ್ರತಿಭೆಗಳನ್ನು ಗುರುತಿಸಲು ಇಂತಹ ಪಂದ್ಯಾಟಗಳು ತುಂಬಾ ಸಹಕಾರಿಯಾಗಲಿದೆ" ಎಂದು ತಿಳಿಸಿದರು.
"ಇಲ್ಲಿನ ಗ್ರಾಮೀಣ ಕ್ರೀಡಾಪಟುಗಳು ತಮ್ಮ ನೈಜ ಪ್ರತಿಭೆಯನ್ನು ಇಂತಹ ಕ್ರೀಡಾಕೂಟದಲ್ಲಿ ಪ್ರದರ್ಶಿಸಿ ತಮ್ಮ ಕ್ರೀಡಾ ಭವಿಷ್ಯ ರೂಪಿಸಿಕೊಳ್ಳಬೇಕು" ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕರನ್ನು ಶಾಸಕರು ಸನ್ಮಾನಿಸಿದರು. ಶಿವಾಜಿ ಯುವಸೇನೆ ಸಮಿತಿ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಕೊಲ್ಲಿರ ದಯಾ, ಮಾನಸ ತಿಮ್ಮಯ್ಯ, ಪವನ್ ಚಿಟ್ಟಿಯಪ್ಪ ಹಾಗೂ ಪ್ರಮುಖರು ಉಪಸ್ಥಿತರಿದ್ದರು.