Kodagu

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ; ನಿಯಮ ಪಾಲಿಸಲು ಮನವಿ

admincoorgdaily

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ; ನಿಯಮ ಪಾಲಿಸಲು ಮನವಿ
ಮಡಿಕೇರಿ:-ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಮಾಡದೆ ಅರ್ಥಪೂರ್ಣವಾಗಿ ದಸರಾ ಆಚರಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಕೋರಿದ್ದಾರೆ. 

         ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ದಸರಾ ಸಮಿತಿ ಪ್ರಮುಖರ ಜೊತೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 

         ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸುಪ್ರಿಂಕೋರ್ಟ್ ನಿರ್ದೇಶನವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಆ ನಿಟ್ಟಿನಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಮಿತಿಯವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು. 

        ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾ ಸಮಿತಿಯವರು ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸಲಹೆ ಮಾಡಿದರು. 

     ಕಾನೂನು ಸುವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಚಿಸಿದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು. ವಾಹನ ನಿಲುಗಡೆ ಪ್ರದೇಶದಲ್ಲಿ ಬೆಳಕು ವ್ಯವಸ್ಥೆ ಮಾಡಬೇಕು. ಚೆಕ್‍ಪೋಸ್ಟ್‍ಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹೆಚ್ಚು ಆಂಬ್ಯುಲೆನ್ಸ್ ಒದಗಿಸುವುದು, ಕೆಎಸ್‍ಆರ್‍ಟಿಸಿ ಯಿಂದ ಹೆಚ್ಚುವರಿ ಬಸ್ ಕಲ್ಪಿಸುವುದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಜಾಗ ಕಾಯ್ದಿರಿಸುವುದು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು. 
     ಅರಣ್ಯ ಇಲಾಖೆ ಅಧಿಕಾರಿಗಳು ಮರದ ಕೊಂಬೆಗಳನ್ನು ಕಡಿಯುವುದು ಮತ್ತಿತರವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಾತನಾಡಿ ದಸರಾ ಸಂಬಂಧ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗುವುದು. ಮಡಿಕೇರಿಯಲ್ಲಿ 27 ಹಾಗೂ ಗೋಣಿಕೊಪ್ಪದಲ್ಲಿ 15 ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕಿದೆ ಎಂದರು.  
     ಪಾರ್ಕಿಂಗ್ ಪ್ರದೇಶದಲ್ಲಿ ಬೆಳಕು ವ್ಯವಸ್ಥೆ ಮಾಡುವುದು, ಪ್ರವಾಸಿ ಸ್ಥಳಗಳಲ್ಲಿ ಡಿಎಫ್‍ಎಂಡಿ(ಡೋರ್ ಪ್ರೇಮ್ ಮೆಟಲ್ ಡಿಟೆಕ್ಟರ್) ಅಳವಡಿಸಬೇಕಿದೆ ಎಂದು ಹೇಳಿದರು. 

     ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿಯವರು ಪ್ರವಾಸೋದ್ಯಮ ಸಮಿತಿಯಿಂದ ಡಿಎಫ್‍ಎಂಡಿ ಅಳವಡಿಸಲಾಗುವುದು ಎಂದು ತಿಳಿಸಿದರು. 

     ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಚೆಕ್‍ಪೋಸ್ಟ್‍ಗಳಲ್ಲಿ ಟೆಂಟ್ ಅಳವಡಿಸುವುದು, ಮತ್ತು ಸಹಾಯವಾಣಿ ಕೇಂದ್ರ ತೆರೆಯುವುದು, ವೈದ್ಯರು ಮತ್ತು ಶ್ರುಶ್ರೂಷಕರನ್ನು ನಿಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು. 
     ಸೆಸ್ಕ್ ಇಲಾಖೆಯವರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದು, ಅಬಕಾರಿ ಇಲಾಖೆಯವರು ಮದ್ಯ ಮಾರಾಟ ನಿಷೇಧ ಸಂಬಂಧ ಕ್ರಮವಹಿಸುವುದು. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ದ ಪ್ರಕರಣ ದಾಖಲಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗೆ ಸೂಚಿಸಿದರು.  

     ವಿರಾಜಪೇಟೆಯಿಂದ ಮಡಿಕೇರಿಗೆ ಬರುವ ವಾಹನಗಳಿಗೆ ಮೇಕೇರಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗವುದು, ಮೇಕೇರಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಬದಲಿ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ವಿವರಿಸಿದರು. 

      ಜನರಲ್ ತಿಮ್ಮಯ್ಯ ವೃತ್ತ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ವಾಚ್ ಟವರ್ ಅಳವಡಿಸಲಾಗುವುದು, ಮಂಟಪದ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ದಶಮಂಟಪ ಸಮಿತಿ ಅವರಿಗೆ ತಿಳಿಸಿದರು. ಎಸ್‍ಒಪಿಯನ್ನು ಎಲ್ಲರೂ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಅವರು ನಿರ್ದೇಶನ ನೀಡಿದರು. 
      ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ಅರುಣ್ ಕುಮಾರ್ ಅವರು ಮಾತನಾಡಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜೊತೆ ಸದಾ ಕೈಜೋಡಿಸಲಾಗುವುದು ಎಂದು ಹೇಳಿದರು. 

      ಹಿಂದಿನಿಂದ ನಡೆದುಕೊಂಡು ಬಂದಿರುವ ದಸರಾಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಮಡಿಕೇರಿ ದಸರಾವು ವಿಜೃಂಭಣೆಯಿಂದ ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು. 

     ದಶಮಂಟಪ ಸಮಿತಿ ಅಧ್ಯಕ್ಷರಾದ ಪಾಂಡನ ಪೂಣಚ್ಚ ಅವರು ಮಾತನಾಡಿ 10 ಮಂಟಪಗಳಿಗೆ ಮಾಹಿತಿ ನೀಡಲಾಗುವುದು. ಮಂಟಪಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು. 

     ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಂಟಪಗಳ ವಾಹನ ಸಂಬಂಧ ಆರ್‍ಟಿಒ ಅವರು ಪ್ರಮಾಣ ಪತ್ರ ನೀಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರಿಗೆ ತಿಳಿಸಿದರು. 
     ಈ ಕುರಿತು ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಅವರು ಮಂಟಪದ ವಾಹನಗಳಿಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಹೇಳಿದರು. 

     ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಂಟಪದವರಿಗೆ ಅಗತ್ಯ ಮಾರ್ಗದರ್ಶನ ಮಾಡುವಂತೆ ಸಲಹೆ ಮಾಡಿದರು. 
     ಕಾನೂನು ಉಲ್ಲಂಘಿಸಬಾರದು. ಜೊತೆಗೆ ದಸರಾ ನೋಡುಗರಿಗೂ ಸಹ ನಿರಾಸೆ ಉಂಟುಮಾಡಬಾರದು. ಆ ರೀತಿ ದಸರಾ ಆಚರಿಸುವಂತೆ ಸಲಹೆ ಮಾಡಿದರು. 

     ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಡಿವೈಎಸ್‍ಪಿ ಸೂರಜ್, ಐಪಿ.ಮೇದಪ್ಪ, ಅವರು ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಇತರರು ಇದ್ದರು.