ಮಡಿಕೇರಿ: ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ - ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
admincoorgdaily

ಮಡಿಕೇರಿ: ಕೇಂದ್ರ ಚುನಾವಣೆ ಆಯೋಗವು ಎಸ್‌ಐಆರ್ ಪ್ರಕ್ರಿಯೆ ಆರಂಭಿಸುವ ಮೂಲಕ ಕಾನೂನು ಬಾಹಿರವಾಗಿ ದೇಶದ ಕೋಟ್ಯಂತರ ಅರ್ಹ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ಯೋಚನೆಯನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾರ್ಯಕರ್ತರು ಹಾಗೂ ಜ್ಞಾನೇಶ್ ಕುಮಾರ್ ಬಂಧಿಸಿ ಎಸ್‌ಐಆರ್ ಸಂಬಂಧ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜ್ಞಾನೇಶ್ ಕುಮಾರ್ ಅವರ ಧೋರಣೆಯನ್ನು ಸ್ವತಃ ಸಹ ಆಯುಕ್ತರೇ ಹಲವು ಬಾರಿ ಪ್ರಶ್ನಿಸಿದ್ದಾರೆ. ಆದರೂ ಯಾವುದೇ ವಿರೋಧವನ್ನು ಲೆಕ್ಕಿಸದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಕ್ರಿಮಿನಲ್ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಮೋಹನ್‌ದಾಸ್, ವಕ್ತಾರ ತೆನ್ನಿರ ಮೈನಾ, ಪ್ರಕಾಶ್ ಆಚಾರ್ಯ, ಸೇರಿದಂತೆ ಹಲವು ಮುಖಂಡರು ಜೊತೆಗಿದ್ದರು.