ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾಗೆ ವಿಧ್ಯುಕ್ತ ಚಾಲನೆ
admincoorgdaily


ಮಡಿಕೇರಿ:- ಇಲ್ಲಿನ ಮಹದೇವಪೇಟೆಯ ಪಂಪಿನಕೆರೆಯಲ್ಲಿ ಭಾನುವಾರ ನಗರದ ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ ದೊರೆಯಿತು.
ನಾಲ್ಕು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಚಾಲನೆ ನೀಡಿದರು.
ನಗರದ ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ದಂಡಿನ ಮರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಪುಷ್ಪಾಲಂಕೃತವಾಗಿ, ಭಕ್ತರ ಜಯಘೋಷದೊಂದಿಗೆ ಮರೆವಣಿಗೆ ಆರಂಭವಾಯಿತು. ಪೂಜೆ ಸಲ್ಲಿಕೆ ಬಳಿಕ ನಾಲ್ಕು ದೇವತೆಗಳ ಕರಗಗಳು ಮೆರವಣಿಗೆ ಹೊರಟವು.
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಪೂಜೆಯ ನಂತರ ಆರಂಭವಾದ ಕರಗಗಳು ನಗರ ಪ್ರದಕ್ಷಿಣೆ ಇನ್ನು 9 ದಿನಗಳ ಕಾಲ ಮುಂದುವರಿಯಲಿದೆ.
ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಿಂದ ಪಿ.ಪಿ. ಚಾಮಿ, ದಂಡಿನ ಮಾರಿಯಮ್ಮ ದೇವಾಲಯದಿಂದ ಜಿಜೇಶ್
ಕೋಟೆ ಮಾರಿಯಮ್ಮ ದೇವಾಲಯದಿಂದ
ಪ್ರಜ್ವಲ್ ಹಾಗೂ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಿಂದ ಗಿರೀಶ್ ಎಂಬುವರು ಕರಗ ಹೊತ್ತಿದ್ದರು.
ಕರಗ ಪೂಜೆ ಸಂದರ್ಭದಲ್ಲಿ ಶಾಸಕರಾದ ಡಾ. ಮಂತರ್ ಗೌಡ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸೂರಜ್, ಪೌರಾಯುಕ್ತರಾದ ಎಚ್.ಆರ್.ರಮೇಶ್ ದಸರಾ ಸಮಿತಿ ಪ್ರಮುಖರಾದ ಅರುಣ್ ಕುಮಾರ್, ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ಪ್ರಕಾಶ್ ಆಚಾರ್ಯ, ಟಿ.ಪಿ.ರಮೇಶ್, ಅನಂತ ಶಯನ, ಜಿ.ಚಿದ್ವಿಲಾಸ್, ಅನಿಲ್ ಎಚ್ ಟಿ, ರಮೇಶ್, ಚುಮ್ಮಿ ದೇವಯ್ಯ, ಮೋಹನ್, ಕವನ್ ಮಡಿಕೇರಿ ದಸರಾ ಹಾಗೂ ವಿವಿಧ ದೇವಾಲಯ ಸಮಿತಿ ಪ್ರಮುಖರು ಇದ್ದರು.