ಮಡಿಕೇರಿ: FASTag ಹೆಸರಿನಲ್ಲಿ ಹೆಚ್ಚು ಹಣ ವಸೂಲಿ: ಗ್ರಾಹಕನಿಗೆ 25,960 ರೂ. ಪರಿಹಾರ ನೀಡಲು ಗ್ರಾಹಕ ಆಯೋಗ ಆದೇಶ
admincoorgdaily

ಮಡಿಕೇರಿ:ಟೋಲ್ ನಲ್ಲಿ Airtel FASTag ನಲ್ಲಿ ಬ್ಯಾಲೆನ್ಸ್ ಇಲ್ಲ ಎಂದು ಹೇಳಿ ಹೆಚ್ಚುವರಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕನ ಪರವಾಗಿ ಆದೇಶ ನೀಡಿದೆ.
ಮಡಿಕೇರಿ, ಗೌಳಿ ಬೀದಿ ನಿವಾಸಿ ವೃತ್ತಿಯಲ್ಲಿ ವಕೀಲರಾದ ಶ್ರೀ ಕೆ.ಡಿ. ದಯಾನಂದ ಅವರು Airtel Payments Bank ನ Airtel FASTag ಸೇವೆ ಪಡೆದಿದ್ದರು. 06/09/2024 ರಂದು ಮಡಿಕೇರಿಯಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ಹೈವೇ ಮೂಲಕ ಪ್ರಯಾಣಿಸುವಾಗ ಟೋಲ್ ಸಿಬ್ಬಂದಿ FASTag ನಲ್ಲಿ ಬ್ಯಾಲೆನ್ಸ್ ಇಲ್ಲ ಎಂದು ಹೇಳಿ ಸ್ಥಳದಲ್ಲೇ ಹೊಸ FASTag ಗೆ ರೂ. 700 ಮತ್ತು ರೀಚಾರ್ಜ್ ಗೆ ರೂ. 500 ವಸೂಲಿ ಮಾಡಿದ್ದಾರೆ.
ಎಲ್ಲಾ ದಾಖಲಾತಿ ಸಲ್ಲಿಸಿದ್ದರೂ 07/09/2024 ರಂದು ಬೆಂಗಳೂರಿನಿಂದ ವಾಪಸ್ ಬರುವಾಗ ಮತ್ತೆ ಕಡಿಮೆ ಬ್ಯಾಲೆನ್ಸ್ ಎಂದು ರೂ. 460 ದಂಡ ಮತ್ತು ಮತ್ತೆ ರೂ. 500 ರೀಚಾರ್ಜ್ ವಸೂಲಿ ಮಾಡಿದ್ದಾರೆ.
ಈ ಬಗ್ಗೆ ವಿಚಾರಿಸಿದಾಗ ತಮಗೆ ಈ ಹಿಂದೆ ನೀಡಿದ್ದ Paytm FASTag 31/03/2024 ರಿಂದಲೇ ಸ್ಥಗಿತಗೊಂಡಿದೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ತಮಗೆ ಮಾಹಿತಿ ನೀಡದೆ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಲಾಗಿದೆ ಎಂದು ದಯಾನಂದ ಅವರು ಕೊಡಗು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷೆ ಡಾ. ರೇಣುಕಾಂಬ.ಎಸ್ ಮತ್ತು ಸದಸ್ಯೆ ಶ್ರೀಮತಿ ಗೌರಮ್ಮ ಅವರಿದ್ದ ಪೀಠವು ಎದುರುದಾರರು ಗ್ರಾಹಕರಿಗೆ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.
ದೂರುದಾರರಿಗೆ 07/09/2024 ರಂದು ಬೆಂಗಳೂರಿನಿಂದ ಮಡಿಕೇರಿಗೆ ಬರುವಾಗ ಪಡೆದ ರೂ. 500+460/- ಅನ್ನು ಹಿಂದಿರುಗಿಸಲು, ಸೇವಾ ನ್ಯೂನತೆಗೆ ಪರಿಹಾರವಾಗಿ ರೂ. 5,000/-, ಮಾನಸಿಕ ವೇದನೆಗೆ ರೂ. 5,000/-, ವ್ಯಾಜ್ಯದ ಖರ್ಚು ವೆಚ್ಚಕ್ಕೆ ರೂ. 5,000/- ಮತ್ತು ಅನುಚಿತ ವ್ಯಾಪಾರ ಪದ್ಧತಿಗೆ ಪರಿಹಾರವಾಗಿ ರೂ. 10,000/- ಪಾವತಿಸಬೇಕು ಎಂದು ಆದೇಶ ನೀಡಿದೆ.