ಮಡಿಕೇರಿ: ಆಸ್ತಿ ವೈಷಮ್ಯದಿಂದ ಅಣ್ಣನನ್ನೇ ಕೊಲೆ ಮಾಡಿದಾತನಿಗೆ ಜೀವಾವಧಿ ಶಿಕ್ಷೆ
admincoorgdaily

ಮಡಿಕೇರಿ, ಅ.28:ಅಣ್ಣನನ್ನೇ ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಮಡಿಕೇರಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿಯಲ್ಲಿ ಸೆಷನ್ಸ್ ಕೇಸ್ ಸಂಖ್ಯೆ: *34/2025* ರ ಆರೋಪಿಯ ವಿರುದ್ಧ ಪ್ರಕರಣವು ದಿನಾಂಕ *23-10-2026* ರಂದು ತೀರ್ಪಾಗಿದ್ದು, ಆರೋಪಿಗೆ ಶಿಕ್ಷೆಯಾಗಿರುತ್ತದೆ.
ಪ್ರಕರಣದ ಸಾರಾಂಶ:
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗಾಳಿಬೀಡು ಗ್ರಾಮದ ವಣಚಲು ಎಂಬಲ್ಲಿ ವಾಸವಿರುವ ಪೂವಮ್ಮರವರ ಪತಿ ಲೋಕನಾಥ್ ಮೃತಪಟ್ಟ ನಂತರ, ಲೋಕನಾಥ್ ರವರ ತಮ್ಮ ಅಪ್ಪಣ್ಣರವರು ಪೂವಮ್ಮರವರೊಂದಿಗೆ ಅವರ ಮನೆಯಲ್ಲಿ ಪೂವಮ್ಮರವರ 2 ಹೆಣ್ಣು ಮಕ್ಕಳಿಗೆ ನೆರವಾಗಲು ಅವರ ಜೊತೆ ವಾಸವಾಗಿದ್ದು, ಅವರ ಕಾಫಿ ತೋಟವನ್ನು ಒಟ್ಟಾಗಿ ಕೃಷಿ ಮಾಡಿಕೊಂಡು ಇದ್ದು, ನಂತರ ಲೋಕನಾಥ್ರವರ ಇನ್ನೊಬ್ಬ ತಮ್ಮ ಅಪರಾಧಿ ಮಾಚಯ್ಯನು ವಣಚಲುವಿಗೆ ಬಂದು ಪೂವಮ್ಮರವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ವಾಸವಾಗಿದ್ದು, ಪೂವಮ್ಮರವರ ಮನೆಯಲ್ಲಿ ಊಟ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದನು.
ಅಪರಾಧಿ ಮಾಚಯ್ಯನಿಗೆ ಪೂವಮ್ಮರವರ ಆಸ್ತಿಯನ್ನು ಅವರ ಮಕ್ಕಳಾದ ರಶಿಕಾ ಮತ್ತು ರಕ್ಷಿತರವರಿಗೆ ಕೊಡುವ ವಿಚಾರದಲ್ಲಿ ಅಪ್ಪಣ್ಣರವರೊಂದಿಗೆ ವೈಮನಸ್ಸು ಇದ್ದು, ದಿನಾಂಕ *16-12-2024* ಬೆಳಿಗ್ಗೆ ಮನೆಯ ಅಂಗಳದಲ್ಲಿ ಅಪರಾಧಿ ಮಾಚಯ್ಯ ಅಪ್ಪಣ್ಣರವರೊಂದಿಗೆ ಜಗಳ ಮಾಡಿಕೊಂಡು ಕೋಪಗೊಂಡ ಅಪರಾಧಿ ಮಾಚಯ್ಯನು ಅಪ್ಪಣ್ಣರವರಿಗೆ ಸೇರಿದ ಬಂಧುವನ್ನು ತಾನು ಈ ಮೊದಲೇ ವಾಸವಿದ್ದ ಲೈನ್ ಮನೆಯಲ್ಲಿ ಇಟ್ಟುಕೊಂಡಿದ್ದು, ಅದನ್ನು ತಂದು ಮನೆಯ ಮುಂದೆ ಇದ್ದ ಅಪ್ಪಣ್ಣರವರಿಗೆ ಗುಂಡು ಹಾರಿಸಿ ಕೊಲೆ ಮಾಡಿರುವುದು ತನಿಖೆಯಿಂದ ಸಾಬೀತಾದ ಕಾರಣ ಮಡಿಕೇರಿ ಗ್ರಾಮಾಂತರ ಪೊಲೀಸರು ಮಾಚಯ್ಯನ ವಿರುದ್ಧ ಕೊಲೆ ಮಾಡಿರುವ ಅಪರಾಧಕ್ಕಾಗಿ ಸಂಪೂರ್ಣ ತನಿಖೆ ಕೈಗೊಂಡು, ಮಾನ್ಯ ನ್ಯಾಯಾಲಯಕ್ಕೆ ಪೊಲೀಸ್ ನಿರೀಕ್ಷಕರಾದ *ಚಂದ್ರಶೇಖರ್ ಹೆಚ್.ವಿ.* ರವರು ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿಯಲ್ಲಿ ನಡೆದಿದ್ದು ಪ್ರಾಸಿಕ್ಯೂಷನ್ ಪರ ಹಾಜರು ಪಡಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಾಚಯ್ಯನು ಮೇಲೆ ಹೇಳಿದ ಕೃತ್ಯವೆಸಗಿರುವುದು ನಿಸ್ಸಂದೇಹವಾಗಿ ಸಾಬೀತಾಗಿದೆ ಎಂದು ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ *ಶ್ರೀಮತಿ ಮಮ್ತಾಜ್* ಇವರು ಮಾಚಯ್ಯನಿಗೆ ಅಪ್ಪಣ್ಣರವರನ್ನು ಕೊಲೆ ಮಾಡಿರುವ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ರೂ.1,20,000/- ದಂಡವನ್ನು* ವಿಧಿಸಿ ತೀರ್ಪು ನೀಡಿದ್ದು ಹಾಗೂ ಮೃತ ಅಪ್ಪಣ್ಣನವರ ವಾರಸುದಾರರಿಗೆ ಕಾನೂನು ಸೇವೆಗಳ ಪ್ರಾಧಿಕಾರ ಸೂಕ್ತ ಪರಿಹಾರವನ್ನು ನಿರ್ಧರಿಸಿ ಆದೇಶಿಸುವಂತೆ ಆದೇಶಿಸಿರುತ್ತಾರೆ.
ಮೇಲ್ಕಂಡ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ *ಶ್ರೀ ದೇವೇಂದ್ರ ಎನ್.ಪಿ.* ರವರು ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.