Kodagu

ಮಡಿಕೇರಿಯ ಓಂಕಾರ್ ಆಟೋ ಸ್ನೇಹಿತರ ಬಳಗದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ : ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿದ ಸಚಿವ ನರೇಂದ್ರಸ್ವಾಮಿ

admincoorgdaily

ಮಡಿಕೇರಿಯ ಓಂಕಾರ್ ಆಟೋ ಸ್ನೇಹಿತರ ಬಳಗದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ : ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿದ ಸಚಿವ ನರೇಂದ್ರಸ್ವಾಮಿ
ಮಡಿಕೇರಿ ನ.1 : ಮಡಿಕೇರಿ ನಗರದ ಓಂಕಾರ್ ಆಟೋ ಸ್ನೇಹಿತರ ಬಳಗದ ವತಿಯಿಂದ 71 ನೇ ಕನ್ನಡ ರಾಜ್ಯೋತ್ಸವವನ್ನು ಆಟೋ ನಿಲ್ದಾಣದಲ್ಲಿ ಅದ್ಧೂರಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಾಯಿ ಭುವನೇಶ್ವರಿಯ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸಿ ಆಟೋ ಚಾಲಕರಿಗೆ ಶುಭ ಹಾರೈಸಿದರು.
ಇದೇ ಪ್ರಥಮ ಬಾರಿಗೆ ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುರಿತು ಓಂಕಾರ್ ಆಟೋ ಸ್ನೇಹಿತರ ಬಳಗದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ಅಧ್ಯಕ್ಷ ಅಜ್ಜೆಟ್ಟಿರ ಲೋಕೇಶ್ ಧ್ವಜಾರೋಹಣ ನೆರವೇರಸಿದರು.

ಓಂಕಾರ್ ಆಟೋ ಸ್ನೇಹಿತರ ಬಳಗದ ಅಧ್ಯಕ್ಷ ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಆಹಾರ ನಿರೀಕ್ಷಕರಾದ ವೀಣಾ ಚೇತನ್, ಸಮಾಜ ಸೇವಕ ಕೋಚನ ಚೇತನ್ ಹಾಗೂ ಶ್ರಮ ಜೀವಿಗಳಾದ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಗೌರಮ್ಮ ಮಾದಮ್ಮಯ್ಯ, ಓಂಕಾರ್ ಡೆಕೋರೇಟರ್ಸ್ ನ ಮಾಲೀಕ ಪ್ರದೀಪ್, ಉದ್ಯಮಿ ದೀಪಕ್, ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.

ಕನ್ನಡ ನಾಡು, ನುಡಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಓಂಕಾರ್ ಆಟೋ ಸ್ನೇಹಿತರ ಬಳಗದ ಅಧ್ಯಕ್ಷ ಉಮೇಶ್, ಸದಸ್ಯರಾದ ವಿಜಯ್, ಹೇಮಂತ್ ಕುಮಾರ್, ಮೋಹನ್, ಯತೀಶ್, ಕಿಶೋರ್, ಕಿಚ್ಚು, ಸುನಿಲ್, ಪಾಪು, ಲೋಹಿತ್, ಮುರುಗ, ಯತೀಶ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಅದ್ಧೂರಿ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪೌರಕಾರ್ಮಿಕರ ಸೇವೆಯನ್ನು ಗೌರವಿಸುವ ಮೂಲಕ ರಾಜ್ಯೋತ್ಸವವನ್ನು ಅರ್ಥಪೂರ್ಣಗೊಳಿಸಿದರು.