ಮಡಿಕೇರಿ: ಪ್ರತ್ಯೇಕ ಸೇನಾ ತರಬೇತಿ ಟೆಂಡರ್ ಹಿಂಪಡೆಯಲು ವಿ.ಹಿ.ಪ ಆಗ್ರಹ
admincoorgdaily

ಮಡಿಕೇರಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಹೊರಡಿಸಲಾಗಿರುವ ಪ್ರತ್ಯೇಕ ಸೇನಾ ತರಬೇತಿ ಟೆಂಡರ್ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖರು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ನ ಹಿರಿಯರಾದ ಸೋಮನಾಥನಂದ ಸ್ವಾಮೀಜಿ ಅವರು, ಸಾಂವಿಧಾನಿಕ ಸಮಾನತೆ ಮತ್ತು ರಾಷ್ಟ್ರದ ಏಕತೆಯ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯವಾಗಿದೆ. ಮತಬ್ಯಾಂಕ್ ರಾಜಕೀಯಕ್ಕಾಗಿ ತರಬೇತಿಯಂತಹ ವಿಷಯವನ್ನು ಬಳಸಬಾರದು ಎಂದ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಹೊರಡಿಸಲಾಗಿರುವ ಪ್ರತ್ಯೇಕ ಸೇನಾ ತರಬೇತಿ ಟೆಂಡರ್ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ಮತ್ತು ಗೋಸಂರಕ್ಷಣೆ ಕೇವಲ ರಾಜಕೀಯ ವಿಚಾರಗಳಲ್ಲ. ಇವು ಸಮಾಜದ ನಂಬಿಕೆ, ಭಾವನೆ ಹಾಗೂ ಸಂವಿಧಾನಬದ್ಧ ಹಕ್ಕುಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳಾಗಿವೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕಾಗಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆಯನ್ನು ಹಿಂಪಡೆಯಬಾರದು, ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಮುಂದುವರಿಸಬೇಕು, ಜನರ ಭಾವನೆಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ಸರ್ಕಾರ ಕೈಬಿಡಬೇಕು ಹಾಗೂ ಕೂಡಲೇ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಹಿ.ಪ. ಜಿಲ್ಲಾ ಅಧ್ಯಕ್ಷ ರಮೇಶ್ ಪುದಿಯೊಕ್ಕಡ, ಕಾರ್ಯದರ್ಶಿ ಸಂತೋಷ್ ಕುಶಾಲನಗರ, ಧರ್ಮ ಪ್ರಸಾರ ಪ್ರಮುಖ ಶಾನ್ ಸೋಮಣ್ಣ ಬೊಳಕಾರಂಡ, ಮಡಿಕೇರಿ ನಗರಾಧ್ಯಕ್ಷ ಗುರುಪ್ರಸಾದ್ ಕಾಳೆಮನೆ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ದುರ್ಗೇಶ್ ಬಜರಂಗಿ, ತಾಲೂಕು ಸಹ ಸಂಯೋಜಕ ಬೊಳಕಾರಂಡ ಜೀವನ್ ಇದ್ದರು.