ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ ಪರಿಶಿಷ್ಟ ಪಂಗಡ ಸಮಾಜಗಳ ಕುಂದುಕೊರತೆ ಸಭೆ ಶೀಘ್ರ ಆಹ್ವಾನ: ಜಿಲ್ಲಾಧಿಕಾರಿ
admincoorgdaily

ಮಡಿಕೇರಿ:-ಪರಿಶಿಷ್ಟ ಪಂಗಡ ಸಮಾಜಗಳ ಸಮಸ್ಯೆ ಆಲಿಸಿ ಪರಿಹರಿಸುವಲ್ಲಿ 15 ದಿನದೊಳಗೆ ಕುಂದುಕೊರತೆ ಸಭೆ ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇದೇ ಅಕ್ಟೋಬರ್, 26 ರಂದು ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.
ಪರಿಶಿಷ್ಟ ಪಂಗಡ ಸಮಾಜಗಳಲ್ಲಿ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಾಗಬೇಕು. ಆ ನಿಟ್ಟಿನಲ್ಲಿ ಯಾವುದೇ ಕುಂದುಕೊರತೆ ಸಭೆಯನ್ನು ತುರ್ತಾಗಿ ಆಹ್ವಾನಿಸಬೇಕು ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ಅಶೋಕ್ ಅವರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಶೀಘ್ರ ಸಭೆ ಆಹ್ವಾನಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಗಬೇಕಿರುವ ಕುಂದುಕೊರತೆಯನ್ನು ಇಲ್ಲಿಯೇ ಬಗೆಹರಿಸಲಾಗುವುದು. ಸಮಸ್ಯೆಗಳು ಇತ್ಯರ್ಥವಾಗದಿರುವುದಕ್ಕೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕರು ಇಲ್ಲದೆ ಯಾವುದೇ ಕಾರ್ಯಕ್ರಮಗಳು ಸಮಾಜದವರಿಗೆ ತಲುಪುತ್ತಿಲ್ಲ. ಹೆಸರಿಗೆ ಮಾತ್ರ ನಿಗಮ ಇದ್ದು, ಕಳೆದ ಮೂರು ವರ್ಷದಿಂದ ಸಮಾಜಕ್ಕೆ ಅನುಕೂಲ ಆಗಿಲ್ಲ. ಆದ್ದರಿಂದ ಈ ಸಂಬಂಧ ಐಟಿಡಿಪಿ ಇಲಾಖಾ ಅಧಿಕಾರಿಯವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಪ್ರಭಾರ ವಹಿಸಬೇಕು ಎಂದು ಕೋರಿದರು.
ಸರ್ಕಾರದಿಂದ ನಿಗಮಗಳಿಗೆ ಅನುದಾನ ಬಿಡುಗಡೆಯಾಗುತ್ತಿದ್ದು, ಈ ಸೌಲಭ್ಯ ವಾಲ್ಮೀಕಿ ಸಮಾಜಕ್ಕೂ ಸಹ ತಲುಪಬೇಕು. ಆ ನಿಟ್ಟಿನಲ್ಲಿ ಸಾಕಷ್ಟು ಕುಂದುಕೊರತೆಗಳು ಇದ್ದು, ವಾಲ್ಮೀಕಿ ಹಾಗೂ ಹಲವು ಪರಿಶಿಷ್ಟ ಪಂಗಡ ಸಮಾಜಗಳ ಕುಂದುಕೊರತೆ ಆಲಿಸಬೇಕು ಎಂದು ಮನವಿ ಮಾಡಿದರು.
ಕುಂದುಕೊರತೆ ಸಭೆಗೆ ತಾಲ್ಲೂಕು ಮಟ್ಟದ ಐಟಿಡಿಪಿ ಇಲಾಖಾ ಅಧಿಕಾರಿಗಳನ್ನು ಸಹ ಆಹ್ವಾನಿಸಬೇಕು ಎಂದು ಇದೇ ಸಂದರ್ಭದಲ್ಲಿ ಅಶೋಕ್ ಅವರು ತಿಳಿಸಿದರು.
ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸಿ: ಸರ್ಕಾರ ಇದೇ ಅಕ್ಟೋಬರ್, 26 ರಂದು ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧರಿಸಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು.
ಕಾರ್ಯಕ್ರಮವನ್ನು ನಗರದ ಗಾಂಧಿ ಭವನದಲ್ಲಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗೆಯೇ ಮುಖ್ಯ ಭಾಷಣಕಾರರನ್ನು ಆಹ್ವಾನಿಸುವ ಸಂಬಂಧ ಐಟಿಡಿಪಿ ಇಲಾಖಾ ಅಧಿಕಾರಿ ಹಾಗೂ ಸಮಾಜದ ಪ್ರಮುಖರು ಚರ್ಚಿಸಿ ನಿರ್ಧರಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಬಗ್ಗೆ ಮಾತನಾಡಿದ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರು ಮುಖ್ಯ ಭಾಷಣಕಾರರ ಸಂಬಂಧ ಎರಡು ಮೂರು ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ಸಮಾಜದ ಪ್ರತಿನಿಧಿಯೊಬ್ಬರು ತಾಲ್ಲೂಕು ಮಟ್ಟದಲ್ಲಿಯೂ ಸಹ ವಾಲ್ಮೀಕಿ ಜಯಂತಿ ಆಚರಿಸಬೇಕು. ಕುಶಾಲನಗರದಲ್ಲಿ ವಾಲ್ಮೀಕಿ ಸಮುದಾಯ ಭವನವಿದ್ದು, ಈ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಹಾಜರಾಗಬೇಕು. ಈ ಸಂಬಂಧ ಹಾಜರಾತಿ ಪಡೆಯಬೇಕು. ಅಧಿಕಾರಿಗಳು ಗೈರು ಆದಲ್ಲಿ ನೋಟೀಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಭಾಗೀರಥಿ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮ ಸಂಬಂಧ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಜೊತೆಗೆ ಮಾಜಿ ಸೈನಿಕರು, ಕೃಷಿಕರು, ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು. ಹಾಗೂ ಕಾರ್ಯಕ್ರಮ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಡಿಯರ ಮುತ್ತಪ್ಪ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವುದರ ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪರಿಶಿಷ್ಟ ವರ್ಗದವರನ್ನು ಗೌರವಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎ.ಗಣಪತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಹಿರಿಯ ಪೊಲೀಸ್ ಇನ್ಸೆಪೆಕ್ಟರ್ ಐ.ಪಿ.ಮೇದಪ್ಪ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಜಿ.ಬಿಲಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರಾದ ದೇವರಾಜು, ಬಸವನಹಳ್ಳಿ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಆರ್.ಅರುಣ್ ರಾವ್, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ವಾಲ್ಮೀಕಿ ಸಮಾಜದ ಪ್ರಮುಖರು ಇದ್ದರು.