ನಾಪೋಕ್ಲುವಿನ ಕೆಪಿಎಸ್ ಶಾಲೆಯಲ್ಲಿ ಮಹಾತ್ಮಾ ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು:ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ದೇಶಕ್ಕೆ ಅವರು ನೀಡಿದ ಮಹೋನ್ನತ ಕೊಡುಗೆಗಳನ್ನು ಭಕ್ತಿಪೂರ್ವಕವಾಗಿ ಸ್ಮರಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಸಿವಿಲ್ ಕಾಮಗಾರಿ ಉಪಸಮಿತಿ ಅಧ್ಯಕ್ಷರಾದ ಕೆ. ಎ. ಹಾರಿಸ್ ಮಾತನಾಡಿ ಅಕ್ಟೋಬರ್ 2 ಭಾರತೀಯರಾದ ನಮಗೆ ಅತ್ಯಂತ ಪವಿತ್ರ ಹಾಗೂ ಮಹತ್ವದ ದಿನವಾಗಿದೆ.ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಹಾಗೂ ದೇಶದ ರಕ್ಷಣೆ ಮತ್ತು ಅನ್ನದಾತರ ಗೌರವವನ್ನು ಎತ್ತಿಹಿಡಿದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಇಬ್ಬರೂ ಮಹಾನ್ ಪುರುಷರು ಜನಿಸಿದ ಪುಣ್ಯದಿನವಿದು.ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಅಹಿಂಸೆ ಮತ್ತು ಸತ್ಯದ ಸಂದೇಶ ಇಡೀ ಜಗತ್ತಿಗೇ ಮಾದರಿಯಾಗಿದೆ. 'ಸ್ವಚ್ಛತೆಯೇ ಭಗವಂತನಿಗೆ ಸಮಾನ' ಎಂದು ನಂಬಿದ್ದ ಗಾಂಧೀಜಿಯವರ ತತ್ವಗಳನ್ನು ಪಾಲಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ.ಕೇವಲ ಜನ್ಮದಿನಾಚರಣೆ ಮಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಶಾಲೆ, ಪರಿಸರ ಮತ್ತು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವೆಂದು ತಿಳಿಸಿದರು.
ಇದೇ ವೇಳೆ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಕೊಡುಗೆಯನ್ನು ನೆನೆದು ಮಾತನಾಡಿದ ಹಾರಿಸಿ "ದೇಶದ ರಕ್ಷಣೆ ಮಾಡುವ ಯೋಧ ಮತ್ತು ಅನ್ನದಾತ ರೈತರ ಗೌರವವನ್ನು ಹೆಚ್ಚಿಸಿದ 'ಜೈ ಜವಾನ್, ಜೈ ಕಿಸಾನ್' ಮಂತ್ರ ಸಾರ್ವಕಾಲಿಕವಾದುದು ಶಾಸ್ತ್ರೀಜಿಯವರ ಪ್ರಾಮಾಣಿಕತೆ, ಸರಳತೆ ಹಾಗೂ ಕರ್ತವ್ಯನಿಷ್ಠೆ ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದರಲ್ಲದೆ
ವಿದ್ಯಾರ್ಥಿಗಳು ಈ ಮಹಾನ್ ನಾಯಕರ ಆದರ್ಶ, ದೇಶಭಕ್ತಿ ಮತ್ತು ಕಾಯಕ ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದು ನುಡಿದು ಶುಭ ಕೋರಿದರು.
ಶಾಲೆಯ ಶಿಕ್ಷಕ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ, ಭಾರತ ಸ್ವಾತಂತ್ರ್ಯ ಗಳಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಸತ್ಯಾಗ್ರಹ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಶಾಂತಿಯುತ ಹೋರಾಟ ನಡೆಸಿ ಸರಳ ಜೀವನ, ಸತ್ಯನಿಷ್ಠೆ, ಅಹಿಂಸೆ ಮತ್ತು ದೇಶಪ್ರೇಮ ನಮಗೆಲ್ಲರಿಗೂ ಮಾದರಿಯಾಗಿದೆ. ಅವರು ಸ್ವಚ್ಛತೆ, ಸ್ವಾವಲಂಬನೆ ಮತ್ತು ಸಮಾಜದ ಎಲ್ಲರಿಗೂ ಸಮಾನ ಗೌರವ ನೀಡುವಂತೆ ಜನರನ್ನು ಪ್ರೇರೇಪಿಸಿದರು.ಲಾಲ್ ಬಹಾದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಘಲ್ಸರಾಯಿಯಲ್ಲಿ ಜನಿಸಿದರು. ಅವರು ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಗೆ ಹೆಸರುವಾಸಿಯಾಗಿದ್ದರು ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಲೆಯ ಪ್ರಾಂಶುಪಾಲರಾದ ಎ. ಎಂ.ವಿಶಾಲ ಅವರು ಮಾತನಾಡಿ ಮಹಾನ್ ನಾಯಕರ ನೆನಪಿಸಿಕೊಳ್ಳುವ ಅವರ ಜನ್ಮ ದಿನದಂದು ನಾವು ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಪ್ರತಿನಿತ್ಯ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಿವಿಲ್ ಕಾಮಾಗಾರಿ ಉಪಸಮಿತಿ ಅಧ್ಯಕ್ಷರಾದ ಕೇಟೋಳಿರ ರಾಜ ಗಣಪತಿ,ಸಮಿತಿ ಸದಸ್ಯ ಸಲೀಂ, ಸಂಸ್ಥೆ ಉಪ ಪ್ರಾಂಶುಪಾಲರಾದ ಎನ್. ಎಸ್.ಶಿವಣ್ಣ,ಶಾಲೆಯ ಶಿಕ್ಷಕವೃಂದ,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.