ಪ್ರತಾಪ್ ಸಿಂಹ ಹೇಳಿಕೆಗೆ ಮಲಯಾಳಿ ಸಂಘಟನೆಗಳಿಂದ ತೀವ್ರ ಖಂಡನೆ
admincoorgdaily

ಮಡಿಕೇರಿ: ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಕೊಡವ ಸಂಸ್ಕೃತಿಗೆ ಕೇರಳ ಮೂಲದ ಮಲಯಾಳಿ ಸಮುದಾಯದಿಂದ ಧಕ್ಕೆಯಾಗುತ್ತಿದೆ ಎಂಬ ಅರ್ಥ ಬರುವಂತೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಕೊಡಗಿನಾದ್ಯಂತ ಇರುವ ವಿವಿಧ ಮಲಯಾಳಿ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ.
ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಸಮಿತಿ ಹಾಗೂ ಕೊಡಗಿನ ವಿವಿಧ ಹಿಂದೂ ಮಲಯಾಳಿ ಸಂಘಟನೆಗಳು, ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ., ವಿಶ್ವಕರ್ಮ ಸಂಘಟನೆ, ಕೆ.ಎನ್.ಎಸ್ ಹಾಗೂ ತಿಯನ್ ಮಹಾಸಭಾ ಸಂಘಟನೆಗಳು ಈ ಹೇಳಿಕೆಯನ್ನು ಖಂಡಿಸಿವೆ.
ಕೊಡಗು ಮತ್ತು ಕೇರಳದ ನಡುವಿನ ಬಾಂಧವ್ಯ ತಲೆಮಾರುಗಳಿಂದ ಬೆಳೆದುಬಂದಿದೆ. ವ್ಯಾಪಾರ, ಹಬ್ಬಗಳು ಮತ್ತು ಧಾರ್ಮಿಕ ಆಚರಣೆಗಳು ಈ ಬಾಂಧವ್ಯವನ್ನು ಗಟ್ಟಿಗೊಳಿಸಿವೆ. ಕೊಡಗಿನ ಹಲವು ಕುಟುಂಬಗಳಲ್ಲಿ ಮತ್ತು ಹಲವು ದೇವಾಲಯಗಳಲ್ಲಿ ಆರಾಧಿಸುವ ಹಲವು ದೇವತೆಗಳ ಪೂಜಾ ಸಂಪ್ರದಾಯಗಳು ಕೇರಳದೊಂದಿಗೆ ನಂಟು ಹೊಂದಿವೆ.
ಕೊಡಗಿನ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಮಲಯಾಳಿ ಕುಟುಂಬಗಳು ಕೊಡವ ಸಮುದಾಯ ಹಾಗೂ ಜಿಲ್ಲೆಯ ಇತರ ಸಮುದಾಯಗಳೊಂದಿಗೆ ತಲೆಮಾರುಗಳಿಂದ ನೆರೆಹೊರೆಯವರಾಗಿ, ಪರಸ್ಪರರ ಸುಖದುಃಖಗಳಲ್ಲಿ ಜೊತೆಯಾಗಿ ಬದುಕಿವೆ. ನಮ್ಮ ಸಮುದಾಯದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಯಾವುದೇ ರಾಜಕೀಯ ನಾಯಕರಿಂದ ಪ್ರಮಾಣಪತ್ರ ಬೇಕಿಲ್ಲ. ಕೊಡಗಿನ ಜನರೊಂದಿಗೆ ನಾವು ಬೆಳೆಸಿಕೊಂಡಿರುವ ಪರಸ್ಪರ ವಿಶ್ವಾಸ ಮತ್ತು ಗೌರವವೇ ನಮ್ಮ ಸಹಬಾಳ್ವೆಗೆ ಸಾಕ್ಷಿ ಎಂದು ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಸುದೀರ್ ಹೇಳಿದರು.
ಕೊಡಗಿನ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಮತ್ತು ಇತಿಹಾಸಕ್ಕೆ ತನ್ನದೇ ಆದ ಗೌರವವಿದೆ. ಅದನ್ನು ನಾವು ಕೂಡ ಗೌರವಿಸುತ್ತೇವೆ. ನಮಗೆ ಬೇಕಾಗಿರುವುದು ಸಂಘರ್ಷವಲ್ಲ, ಗೌರವ. ನಮಗೆ ಬೇಕಾಗಿರುವುದು ದ್ವೇಷವಲ್ಲ, ಸಹಬಾಳ್ವೆ. ಆದರೆ ನಮ್ಮ ಸಮುದಾಯದ ಆತ್ಮಗೌರವದ ವಿಚಾರದಲ್ಲಿ ನಾವು ಎಂದಿಗೂ ಮೌನವಾಗಿರುವುದಿಲ್ಲ.
ಕೊಡಗಿನ ಸಂಸ್ಕೃತಿಯನ್ನು ನಾಶ ಮಾಡುತ್ತಿರುವುದಕ್ಕೆ ಪ್ರತಾಪ್ ಸಿಂಹ ಅವರ ಬಳಿ ನಿರ್ದಿಷ್ಟವಾದ ಸಾಕ್ಷ್ಯಗಳಿದ್ದರೆ ಅವುಗಳನ್ನು ಜನರ ಮುಂದೆ ಇಡಬೇಕು. ಯಾರಾದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಇಡೀ ಮಲಯಾಳಿ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸಬೇಡಿ. ಕೊಡಗಿನ ಸಂಸ್ಕೃತಿಯ ಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ಕಳವಳದ ಬಗ್ಗೆ ಪರಸ್ಪರ ಗೌರವದಿಂದ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಮಲಯಾಳಿ ಜನಾಂಗದವರ ಮೇಲೆ ಸಾರ್ವಜನಿಕ ಸಮಾರಂಭದಲ್ಲಿ ಮಾಡಿರುವ ನಿಂದನಾರ್ಹ ಹೇಳಿಕೆಯನ್ನು ಹಿಂಪಡೆದು, ಅದರಿಂದ ಸಮುದಾಯಕ್ಕೆ ಉಂಟಾದ ನೋವಿಗೆ ಪತ್ರಿಕಾಗೋಷ್ಠಿಯ ಮೂಲಕ ವಿಷಾದ ವ್ಯಕ್ತಪಡಿಸಬೇಕು. ತಪ್ಪಿದಲ್ಲಿ ಮುಂದೆ ಆಗುವ ಪರಿಣಾಮಗಳಿಗೆ ಪ್ರತಾಪ್ ಸಿಂಹ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವಿಧ ಮಲಯಾಳಿ ಸಮುದಾಯದ ಪ್ರಮುಖರಾದ ಶೀಭಾ ಪ್ರಥ್ವಿನಾಥ್, ಪ್ರೇಮಾನಂದ್, ಪ್ರಶಾಂತ್, ಅಶೋಕ್ ಕುಮಾರ್, ರವೀಂದ್ರನ್ ಇದ್ದರು.