ಕೆಸರು ಗದ್ದೆಯಲ್ಲಿ ಮರಾಟಿ ಬಾಂಧವರ ಸಂಭ್ರಮ ನಮ್ಮ ಸಂಸ್ಕೃತಿ ಜತೆಗೆ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಿ: ಪರಮೇಶ್ವರ್
admincoorgdaily


ಮಡಿಕೇರಿ: ಹಚ್ಚ ಹಸಿರಿನ ಬೆಟ್ಟಗುಡ್ಡಗಳ ಸೌಂದರ್ಯದ ನಡುವೆ ೨ನೇ ಮೊಣ್ಣಂಗೇರಿಯ ಮರಾಟಿ ಸೋಮಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮರಾಟಿ ಸಮುದಾಯದ ಬಾಂಧವರು ಮಿಂದೇದ್ದರು.
ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಸಾಮಾನ್ಯ. ಅದರಂತೆ ಮೋಡಕವಿದ ವಾತಾವರಣದೊಂದಿಗೆ ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಹಾಗೂ ವಿವಿಧ ಉಪಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಸಾಕ್ಷಿಯಾಯಿತು.
ಕೆಸರುಗದ್ದೆಯಲ್ಲಿ ಕ್ರೀಡಾಪ್ರೇಮಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು. ಆಟಗಾರರ ಏಳುಬೀಳುಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿದವು. ಚುಮು ಚುಮು ಚಳಿಯ ನಡುವೆ ಮಳೆಯ ಸಿಂಚನವು ಕ್ರೀಡಾಪಟುಗಳಿಗೆ ಮತ್ತಷ್ಟು ಉತ್ಸಾಹ ನೀಡಿತು.
ಮೊಣಕಾಲುವರೆಗೆ ನೀರು ತುಂಬಿದ್ದ ಕೆಸರುಗದ್ದೆಯಲ್ಲಿ ವಿವಿಧ ವಿಭಾಗದಲ್ಲಿ ಓಟದ ಸ್ಪರ್ಧೆ, ಜತೆಗೆ ವೇಗದ ನಡಿಗೆ, ಕಂಬ ಸುತ್ತಿ ಓಡುವುದು, ಮಡಿಕೆ ಹೊಡೆಯುವುದು, ಜೋಡಿ ಓಟ, ಹಗ್ಗ ಜಗ್ಗಾಟ(೭ ಜನರ ತಂಡ), ಕೆಸರಿನಲ್ಲಿ ಅಡಿಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಉಪ್ಪುಮೂಟೆ(ಬೆನ್ನಿನ ಮೇಲೆ ಓರ್ವ ವ್ಯಕ್ತಿಯನ್ನು ಹೊತ್ತು ಓಡುವುದು) ಓಟ ಮತ್ತು ಬೊಗಸೆಯಿಂದ ಕೆಸರು ತುಂಬಿಸುವ ಸ್ಪರ್ಧೆ ಸೇರಿದಂತೆ ೧೪ ಬಗೆಯ ಸ್ಪರ್ಧೆಗಳು ರೋಚಕವಾಗಿ ಮೂಡಿಬಂದವು.
ಕ್ರೀಡಾಕೂಟ ಉದ್ಘಾಟನೆ: ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಮಡಿಕೇರಿ ತಾಲೂಕು ಸಂಘಟನಾ ಕಾರ್ಯದರ್ಶಿ ಎಂ.ಟಿ.ದೇವಪ್ಪ ಕಟ್ಟೆಮಾಡು ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಮತ್ತು ಯುವಕರು ಮಣ್ಣಿನಿಂದ ದೂರವಾಗುತ್ತಿದ್ದಾರೆ. ಇಂತಹ ಕೆಸರುಗದ್ದೆ ಕ್ರೀಡೆಗಳು ನಮ್ಮನ್ನು ಮತ್ತೆ ಪ್ರಕೃತಿಯೊಂದಿಗೆ ಬೆಸೆಯುತ್ತವೆ. ದೈಹಿಕ ಶ್ರಮದ ಜೊತೆಗೆ ಮಾನಸಿಕ ನೆಮ್ಮದಿ ನೀಡುತ್ತವೆ. ಜತೆಗೆ ನಮ್ಮ ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ಅಧ್ಯಕ್ಷ ಎಂ.ಕೆ.ಸಂತೋಷ್ ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷೆ ಜಲಜಾನವೀನ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಂ.ನರಸಿಂಹ, ಜಿಲ್ಲಾ ಸಂಘದ ಕಾರ್ಯದರ್ಶಿ ಹೂವಮ್ಮ ಇತರರಿದ್ದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವನ್ನು ಸಮಾಜದ ಹಿರಿಯರಾದ ಮರಾಟಿ ಸೋಮಪ್ಪ ಅವರು ಉದ್ಘಾಟಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಮರಾಟಿ ಒಕ್ಕೂಟ ಮೂಡಬಿದ್ರೆ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಅವರು, ಕೆಸರು ಗದ್ದೆ ಕ್ರೀಡೆಗಳನ್ನು ವಿಶಿಷ್ಟವಾಗಿ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮರಾಟಿ ಸಭಾಭವನ ಕಾಮಗಾರಿಗೆ ೧ ಲಕ್ಷ ದೇಣಿಗೆ ನೀಡಿ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಮರಾಟಿ ಒಕ್ಕೂಟ ಬೆಂಗಳೂರು ಅಧ್ಯಕ್ಷ ಕೆ.ಸುಂದರ ನಾಯ್ಕ , ಸಂಘದ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಂಘದ ನಿವೇಶನದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಬರಬೇಕಾದ ಅನುದಾನದ ಬಾಕಿ ಕಂತನ್ನು ಬಿಡುಗಡೆಗೊಳಿಸುವಂತೆ ಪರಿಶಿಷ್ಟ ಪಂಗಡಗಳ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿರುವುದಾಗಿ ಸಭೆಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ಅವರು, ಕೆಸರುಗದ್ದೆ ಗ್ರಾಮೀಣ ಕ್ರೀಡಾಕೂಟವು ಗ್ರಾಮದ ಜನಾಂಗ ಬಾಂಧವರಿಗೆ ಮನರಂಜನೆ ನೀಡುವ ಕ್ರೀಡಾಕೂಟವಾಗಿದೆ. ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಒಂದು ದಿನದ ಈ ಕ್ರೀಡಾಕೂಟದಲ್ಲಿ ಹಲವಾರು ಸ್ಪರ್ಧಾಳುಗಳು ಬಂದು ಭಾಗವಹಿಸಿ ಸಂಭ್ರಮಿಸಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗ ಬಾಂಧವರು ಆಡಳಿತ ಮಂಡಳಿಯಿಂದ ನಡೆಸುವ ಎಲ್ಲಾ ಸಾಮಾಜಿಕ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕಾರ ನೀಡಬೇಕೆಂದು ಅವರು ಸಮಾಜ ಬಾಂಧವರಲ್ಲಿ ಮನವಿ ಮಾಡಿದ ಅವರು, ಇಂತಹ ಗ್ರಾಮೀಣ ಕ್ರೀಡಾಕೂಟಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷರಾದ ದೇವಕಿ ಜಿ.ಆರ್.ನಾಯ್ಕ, ಪಿ.ಕೆ.ಗಂಗಾಧರ, ಮಹಿಳಾ ವೇದಿಕೆಯ ಅಧ್ಯಕ್ಷೆ ಜಲಜಾನವೀನ, ಯುವಕ ಸಂಘದ ಅಧ್ಯಕ್ಷ ಎಂ.ಕೆ.ಸಂತೋಷ್, ಎರಡನೇ ಮಣ್ಣಂಗೇರಿ ಉಪಸಮಿತಿ ಅಧ್ಯಕ್ಷ ಎಂ.ಎಸ್.ವೆಂಕಪ್ಪ, ಕುಂಡಾಡು ಉಪಸಮಿತಿ ಅಧ್ಯಕ್ಷ ಸಿ.ಎಚ್‌ಶ್ರೀಧರ್, ಕುದ್ರೆಪಾಯ ಉಪ ಸಮಿತಿ ಅಧ್ಯಕ್ಷ ಕೆ.ಜೆ.ಶಶಿಕಾಂತ್, ಕರಿಕೆ ಉಪಸಮಿತಿ ಅಧ್ಯಕ್ಷ ಕೆ.ಜಿ.ಹೊನ್ನಪ್ಪ, ಕಾನೂರು ಉಪಸಮಿತಿ ಅಧ್ಯಕ್ಷ ನಿರಲ್ ಕುಮಾರ್ ಸೇರಿದಂತೆ ಸಂಘದ ಪ್ರಮುಖರು ಇದ್ದರು.
ಕ್ರೀಡಾಕೂಟದ ವಿಜೇತರ ವಿವರ
ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮೊಣ್ಣಂಗೇರಿ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕರಿಕೆ ಎ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮಹಿಳೆಯರ ವಿಭಾಗದಲ್ಲಿ ಕರಿಕೆ ಎ ತಂಡ ಪ್ರಥಮ, ಜಲಜಾಕ್ಷಿ ತಂಡ ಕಾನೂನು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
೧-೫ನೇ ತರಗತಿಯ ಬಾಲಕರ ವಿಭಾಗದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ರವಿತ್(ಪ್ರ), ಸಮರ್ಥ್(ದ್ವಿ), ಬಾಲಕಿಯರ ವಿಭಾಗದಲ್ಲಿ ಅನ್ವಿತ(ಪ್ರ), ಮೌಲ್ಯ(ದ್ವಿ), ೬-೮ನೇ ತರಗತಿಯ ಬಾಲಕರ ವಿಭಾಗದಲ್ಲಿ ಯುವರಾಜ್(ಪ್ರ), ಮನ್ವಿತ್(ದ್ವಿ), ಬಾಲಕಿಯರ ವಿಭಾಗದಲ್ಲಿ ಲಿಖಿತ(ಪ್ರ), ಕೆ.ಪಿ.ಯಕ್ಷಿತ್ ದ್ವಿತೀಯ ಸ್ಥಾನ ಪಡೆದರು.
೧೬-೨೦ ವರ್ಷದ ಯುವಕರ ವಿಭಾಗದಲ್ಲಿ ರಕ್ಷಿತ್(ಪ್ರ), ಜತಿನ್(ದ್ವಿ), ಯುವತಿಯರ ವಿಭಾಗದಲ್ಲಿ ಡಿಂಪಲ್(ಪ್ರ), ಚಶ್ಮಿತಾ(ದ್ವಿ), ೨೫-೩೫ ವರ್ಷದ ಪುರುಷರ ವಿಭಾಗದಲ್ಲಿ ಮೋಹನ್(ಪ್ರ), ಅಶ್ವತ್(ದ್ವಿ), ಮಹಿಳೆಯ ವಿಭಾಗದಲ್ಲಿ ಪವಿತ್ರ(ಪ್ರ), ಚಂದನ ದ್ವಿತೀಯ ಸ್ಥಾನ ಪಡೆದರು.
೩೫-೪೯ ವರ್ಷದ ಪುರುಷರ ವಿಭಾಗದಲ್ಲಿ ಉತೀಶ್(ಪ್ರ), ನವೀನ್(ದ್ವಿ), ಮಹಿಳೆಯರ ವಿಭಾಗದಲ್ಲಿ ಹರಿಣಿ(ಪ್ರ), ವಾರಿಜ(ದ್ವಿ) ಸ್ಥಾನ ಪಡೆದರು. ವೇಗದ ನಡಿಗೆ ೫೦ ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ವೆಂಕಪ್ಪ ನಾಯ್ಕ(ಪ್ರ), ವಿಠಲ(ದ್ವಿ), ಮಹಿಳೆಯರ ವಿಭಾಗದಲ್ಲಿ ಹೂವಮ್ಮ(ಪ್ರ), ಸರಸ್ವತಿ(ದ್ವಿ) ಸ್ಥಾನ ಪಡೆದರು.
ಕಂಬ ಸುತ್ತಿ ಓಡುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಯುವರಾಜ್(ಪ್ರ), ಕೆ.ಎಸ್.ಸತೀಶ್(ದ್ವಿ), ಮಹಿಳೆಯರ ವಿಭಾಗದಲ್ಲಿ ಡಿಂಪಲ್(ಪ್ರ), ಹೂವಮ್ಮ(ದ್ವಿ) ಸ್ಥಾನ ಪಡೆದರು. ಜೋಡಿ ಓಟದ ಪುರುಚರ ವಿಭಾಗದಲ್ಲಿ ಕೆ.ಎನ್.ಸಂತೋಷ್ ಮತ್ತು ಮೋಹನ್(ಪ್ರ), ಯುವರಾಜ್ ಮತ್ತು ಜತಿನ್(ದ್ವಿ), ಮಹಿಳೆಯರ ವಿಭಾಗದಲ್ಲಿ ಪವಿತ್ರ ಮತ್ತು ಚಂದನ(ಪ್ರ), ಶ್ಯಾಮಲ ಮತ್ತು ಲೀಲಾವತಿ(ದ್ವಿ) ಸ್ಥಾನ ಪಡೆದರು.
ಅಡಿಕೆ ಹಾಳೆ ಎಳೆಯುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮೋನಿಶ್ ಮತ್ತು ಮನ್ವಿತ್(ಪ್ರ), ಚರಣ್ ಮತ್ತು ಅಶ್ವತ್(ದ್ವಿ), ಮಹಿಳೆಯರ ವಿಭಾಗದಲ್ಲಿ ಹರಿಣಿ ಮತ್ತು ಜಯಂತಿ(ಪ್ರ), ವನಿತಾ ಮತ್ತು ವಿನಿತಾ(ದ್ವಿ) ಸ್ಥಾನ ಪಡೆದರು. ಹಿಮ್ಮುಖ ಓಟದ ಪುರುಷರ ವಿಭಾಗದಲ್ಲಿ ಕೆ.ಎಸ್.ಸಂತೋಷ್(ಪ್ರ), ಯುವರಾಜ್(ದ್ವಿ), ಮಹಿಳೆಯರ ವಿಭಾಗದಲ್ಲಿ ಡಿಂಪಲ್(ಪ್ರ), ಶ್ಯಾಮಲ(ದ್ವಿ) ಸ್ಥಾನ ಪಡೆದರು.
ಉಪ್ಪುಮೂಟೆ(ಬೆನ್ನಿನ ಮೇಲೆ ಓರ್ವ ವ್ಯಕ್ತಿಯನ್ನು ಹೊತ್ತು ಓಡುವುದು) ಓಟ ಪುರುಷರ ವಿಭಾಗದಲ್ಲಿ ಜತಿನ್ ಮತ್ತು ಯುವರಾಜ್(ಪ್ರ), ಗೌತಮ್ ಮತ್ತು ರಕ್ಷಿತ್(ದ್ವಿ), ಮಹಿಳೆಯರ ವಿಭಾಗದಲ್ಲಿ ಜಯಂತಿ ಮತ್ತು ಹರಿಣಿ(ಪ್ರ), ಅನ್ವಿತ ಮತ್ತು ಸಿಂಚನ(ದ್ವಿ) ಸ್ಥಾನ ಪಡೆದರು.
ಬೊಗಸೆಯಿಂದ ಕೆಸರು ತುಂಬಿಸುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಯತೀಶ್ ಕರಿಕೆ ಮತ್ತು ತಂಡ(ಪ್ರ), ದಿನೇಶ್ ಕುಂಡಾಡು ಮತ್ತು ತಂಡ(ದ್ವಿ), ಮಹಿಳೆಯರ ವಿಭಾಗದಲ್ಲಿ ಕುದುರೆಪಾಯ ತಂಡ(ಪ್ರ), ೨ನೇ ಮೊಣ್ಣಂಗೇರಿ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.