Kodagu

ಸೋಮವಾರಪೇಟೆ ತಾಲೂಕಿನ ಹೆಗ್ಗುಳ ಗ್ರಾಮದಲ್ಲಿ ಸಾಮೂಹಿಕವಾಗಿ ಭತ್ತ ನಾಟಿ ಕಾರ್ಯಕ್ರಮ

admincoorgdaily

ಸೋಮವಾರಪೇಟೆ ತಾಲೂಕಿನ ಹೆಗ್ಗುಳ ಗ್ರಾಮದಲ್ಲಿ ಸಾಮೂಹಿಕವಾಗಿ ಭತ್ತ ನಾಟಿ ಕಾರ್ಯಕ್ರಮ
ಸೋಮವಾರಪೇಟೆ: ತಾಲ್ಲೂಕಿನ ಹೆಗ್ಗುಳ ಗ್ರಾಮದ ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಗ್ರಾಮಸ್ಥರು ಶುಕ್ರವಾರ ಸಾಮೂಹಿಕ ನಾಟಿ ಕಾರ್ಯ ನಡೆಸಿದರು.

ಸುಮಾರು 3.25 ಏಕರೆ ಪ್ರದೇಶದಲ್ಲಿ ನಡೆಯುವ ನಾಟಿ ಕಾರ್ಯದಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬವೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೊದಲ ದಿನ ಪ್ರತಿ ಮನೆಯಿಂದ ಒಬ್ಬರು ಹಾಗೂ ಎರಡನೇ ದಿನ ಇಬ್ಬರಂತೆ ಗ್ರಾಮಸ್ಥರು ಗದ್ದೆಗೆ ಆಗಮಿಸಿ ನಾಟಿ ಕಾರ್ಯದಲ್ಲಿ ಭಾಗವಹಿಸಿದರು.

ಸಾಮೂಹಿಕ ನಾಟಿ ಕಾರ್ಯದ ಕುರಿತು ಗ್ರಾಮದ ಅಧ್ಯಕ್ಷ ಎಚ್.ಎನ್. ವಸಂತ ಮಾತನಾಡಿ, ಗದ್ದೆಯಲ್ಲಿ ಬೆಳೆಯುವ ಭತ್ತದಿಂದ ದೊರೆಯುವ ಆದಾಯವನ್ನು ದೇವಸ್ಥಾನದ ಹರಿಸೇವೆ, ಅರ್ಚಕರ ವೇತನ ಸೇರಿದಂತೆ ವರ್ಷವಿಡೀ ದೇವಸ್ಥಾನಕ್ಕೆ ತಗಲುವ ಖರ್ಚುಗಳಿಗೆ ಬಳಸಲಾಗುತ್ತದೆ. ಗ್ರಾಮಸ್ಥರು ನಿಗದಿತ ಸಮಯಕ್ಕೆ ಆಗಮಿಸಿ ಒಟ್ಟಾಗಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಎಲ್ಲರೂ ಒಂದೆಡೆ ಸೇರಿ ಊಟ ಮಾಡುವ ಮೂಲಕ ಗ್ರಾಮದ ಒಗ್ಗಟ್ಟನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಎಚ್.ಕೆ. ಪ್ರಕಾಶ್ ಮಾತನಾಡಿ, ಕಳೆದ 25 ವರ್ಷಗಳಿಂದ ಗ್ರಾಮಸ್ಥರು ಒಗ್ಗಟ್ಟಿನಿಂದ ದೇವಸ್ಥಾನದ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಗದ್ದೆಯ ಎಲ್ಲ ಕೆಲಸಗಳನ್ನು ಗ್ರಾಮಸ್ಥರೇ ನಿರ್ವಹಿಸುವುದಲ್ಲದೆ, ಅದಕ್ಕೆ ತಗಲುವ ಖರ್ಚನ್ನೂ ಅವರೇ ಭರಿಸುತ್ತಾರೆ. ದೇವಸ್ಥಾನಕ್ಕೆ ಬೇರೆ ಯಾವುದೇ ಪ್ರಮುಖ ಆದಾಯದ ಮೂಲವಿಲ್ಲ. ಗದ್ದೆಯಲ್ಲಿ ಬೆಳೆಯುವ ಭತ್ತವನ್ನು ಮಾರಾಟ ಮಾಡಿದಾಗ ಸುಮಾರು 1.50 ಲಕ್ಷ ರೂ.ಗಳಷ್ಟು ಆದಾಯ ದೊರೆಯುತ್ತದೆ. ಈ ಹಣವನ್ನು ದೇವಸ್ಥಾನದ ಅಭಿವೃದ್ಧಿ ಹಾಗೂ ವಿವಿಧ ಖರ್ಚುಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.

ಸಾಮೂಹಿಕ ನಾಟಿ ಕಾರ್ಯದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ನವೀನ, ಸಹ ಕಾರ್ಯದರ್ಶಿ ನಿಖಿತ್, ಖಜಾಂಚಿ ಎಚ್.ಎಸ್. ಪುಟ್ಟಸ್ವಾಮಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.