ಎಸ್.ಐ.ಆರ್ ರದ್ದಿಗೆ ಆಗ್ರಹಿಸಿ ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆ
admincoorgdaily

ಸಿದ್ದಾಪುರ: ಎಸ್.ಐ.ಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸಿದ್ದಾಪುರದ ಸಮಾನ ಮನಸ್ಕರ ವೇದಿಕೆ ವತಿಯಿಂದ ಕಾಲ್ನಡಿಗೆ ಜಾಥಾ ಹಾಗೂ ಸಾರ್ವಜನಿಕ ಸಭೆ ಸೋಮವಾರ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಡೆಯಿತು.
ನೆಲ್ಯಹುದಿಕೇರಿ ಪಟ್ಟಣದಲ್ಲಿ ಕಾಲ್ನಡಿಗೆ ಜಾಥಾವನ್ನು ಅಹಿಂದ ಬಳಗದ ಕೊಡಗು ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ಉದ್ಘಾಟಿಸಿದರು. ನೂರಾರು ಮಂದಿ ಜಾಥಾದಲ್ಲಿ ಪಾಲ್ಗೊಂಡು ಸಿದ್ದಾಪುರದತ್ತ ಹೆಜ್ಜೆ ಹಾಕಿದರು. ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು.
ಸಭೆಯಲ್ಲಿ ಕೇರಳ ರಾಜ್ಯದ ಡಿ.ವೈ.ಎಫ್.ಐ ಸಹಕಾರ್ಯದರ್ಶಿ ಕೆ. ಅನುಶ್ರೀ ಮಾತನಾಡಿ, ಎಸ್.ಐ.ಆರ್ ಪ್ರಕ್ರಿಯೆಯಿಂದ ದೇಶದ 13 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮೃತಪಟ್ಟಿದ್ದಾರೆ ಎಂದು ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಜಾಪ್ರಭುತ್ವವನ್ನು ಕಾಪಾಡಬೇಕಾದ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾನ ಮನಸ್ಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್.ಐ.ಆರ್ ಪ್ರಕ್ರಿಯೆಯಿಂದ ಜನಸಾಮಾನ್ಯರಿಗೆ ಉಂಟಾಗುವ ಸಮಸ್ಯೆಗಳ ಕುರಿತು ವಿವರಿಸಿದರು.
ದಕ್ಷಿಣ ಕನ್ನಡದ ಧಾರ್ಮಿಕ ಪರಿಷತ್ ಪ್ರಮುಖರಾದ ಲಕ್ಷ್ಮೀಶ್ ಕಬ್ಬಡ್ಕ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಷಡ್ಯಂತ್ರದ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುತ್ತಿದೆ ಎಂದು ಟೀಕಿಸಿದರು.
ಕೆ.ಪಿ.ಸಿ.ಸಿ ವಕ್ತಾರ ಲಕ್ಷ್ಮಣ್ ಮಾತನಾಡಿ, ರಾಜ್ಯದಲ್ಲಿ ಒಂದು ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಚುನಾವಣಾ ಆಯೋಗ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದೆ. ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಪಿ.ವಿ. ಜಾನ್ಸನ್ ವಹಿಸಿದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡ ನೆರವಂಡ ಉಮೇಶ್, ಸಮಾನ ಮನಸ್ಕರ ವೇದಿಕೆಯ ಪ್ರಮುಖರಾದ ಎ.ಕೆ. ಹಕ್ಕೀಂ, ಎಸ್.ಬಿ. ಪ್ರತೀಶ್, ಕೆ.ಎಂ ಸೈಯದ್ ಭಾವ, ಹೆಚ್.ಬಿ. ರಮೇಶ್, ಬಷೀರ್ ಅಹ್ಮದ್, ಎ.ಎಸ್. ಮುಸ್ತಫ, ಕೆ.ಯು. ಮಜೀದ್, ಕೆ.ಎ ಅಸ್ಕರ್, ಎಂ.ಕೆ. ಅಶ್ರಫ್, ಜೋಸೆಫ್ ಸಾಂ, ಉದಯ ಕುಮಾರ್, ವೈಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.