ಕಸ್ತೂರಿ ರಂಗನ್ ವರದಿ, ಸಿ ಮತ್ತು ಡಿ ಹಾಗೂ ಸೆಕ್ಷನ್-4 ವಿರೋಧಿಸಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
admincoorgdaily

ಮಡಿಕೇರಿ: ಕಸ್ತೂರಿ ರಂಗನ್ ವರದಿ, ಸಿ ಮತ್ತು ಡಿ ಹಾಗೂ ಸೆಕ್ಷನ್-4 ವಿರೋಧಿಸಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರೈತ ಸಂಘ, ಕಾಫಿ ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಸುಮಾರು 1 ಕಿ.ಮೀ ಉದ್ದಕ್ಕು ಹೆಚ್ಚು ದೂರ ಮಂಗಳೂರು, ಮೈಸೂರು, ಗೋಣಿಕೊಪ್ಪ ರಸ್ತೆಯಲ್ಲಿ ವಾಹನ ಸರದಿ ಸಾಲಿನಲ್ಲಿ ನಿಂತು ಹೈರಾಣದರು. ನಮ್ಮ ಹಕ್ಕಿಗಾಗಿ, ನಮ್ಮ ನೆಲಕ್ಕಾಗಿ ಘೋಷಣೆಯೊಂದಿಗೆ ನೂರಾರು ರೈತರು ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕಾಫಿ, ಮೆಣಸು, ಅಡಿಕೆ, ಭತ್ತದ ಕೃಷಿಗೆ ನಿರ್ಬಂಧ ಹೇರಬಾರದು, ಸ್ಥಳೀಯರ ಭೂಮಿ ಹಕ್ಕಿಗೆ ಧಕ್ಕೆ ತರಬಾರದು ಎಂದು ಆಗ್ರಹಿಸಲಾಯಿತು. ಕರಡು ಅಧಿಸೂಚನೆಗೂ ಮುನ್ನ ಗ್ರಾಮಸಭೆ ನಡೆಸಿ ಅಭಿಪ್ರಾಯ ಪಡೆಯಬೇಕು, ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಒತ್ತಾಯಿಸಲಾಯಿತು.
ಕೆಲ ಗ್ರಾಮಗಳ ಜಮೀನು ಸಿ ಮತ್ತು ಡಿ, ಸೆಕ್ಷನ್ 4 ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರು ಅರಣ್ಯ ಇಲಾಖೆ ಕಿರುಕುಳ ಎದುರಿಸುತ್ತಿದ್ದಾರೆ. ಆರ್.ಟಿ.ಸಿಯಲ್ಲಿನ 'ಅರಣ್ಯ' ನಮೂದನ್ನು ಹಿಂಪಡೆಯಬೇಕು, ಬಫರ್ ಝೋನ್ ಶೂನ್ಯಕ್ಕೆ ನಿಗದಿಪಡಿಸಬೇಕು, 11 ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.
7ನೇ ಕರಡಿನಲ್ಲಿ ಕೊಡಗಿನ 55 ಗ್ರಾಮ ಸೇರ್ಪಡೆಯಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ. ತಕರಾರು ಸಲ್ಲಿಸದಿದ್ದರೆ ಇದೇ ಅಂತಿಮವಾಗಲಿದ್ದು, ಕೇರಳದಂತೆ ನಾವೂ ವಿರೋಧಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಶಾಸಕ ಡಾ. ಮಂತರ್ ಗೌಡ, ಹೋರಾಟ ಸಮಿತಿಯ ದೀಪಕ್ ಬಿ.ಜೆ, ದಿವಾಕರ್ ಕೂತಿ, ಸಜನ್ ನಂದಿರ, ಸೋಮವಾರಪೇಟೆ ರೈತ ಸಂಘದ ಅಧ್ಯಕ್ಷ ದಿನೇಶ್, ಮಾಜಿ ಶಾಸಕರಾದ ಅಪ್ಪಚು ರಂಜನ್, ಕೆ.ಜಿ. ಬೋಪಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.